ಬೆಂಗಳೂರು:
ಬಹುಕೋಟಿ ಐಎಂಎ ಹಗರಣದ ಆರೋಪಿಯಾಗಿರುವ ಮನ್ಸೂರ್ ಖಾನ್ ಎಲ್ಲಿದ್ದಾನೆಂದು ತಿಳಿದಿದೆ ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥ ರವಿಕಾಂತೇ ಗೌಡ ತಿಳಿಸಿದ್ದಾರೆ.
ರಾಸ್ ಅಲ್ ಖೈಮಾ ಎಂಬಲ್ಲಿರುವ ಆರೋಪಿ ಮನ್ಸೂರ್ ಖಾನ್ ಬಿಡುಗಡೆ ಮಾಡಿದ 18 ನಿಮಿಷಕ್ಕೂ ಹೆಚ್ಚು ಸಮಯದ ವಿಡಿಯೋ ಕುರಿತು ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ಐಎಂಎ ವಂಚನೆ ಪ್ರಕರಣದ ರೂವಾರಿ ಸಂಸ್ಥೆಯ ಸ್ಥಾಪಕ ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂಬುದು ತಿಳಿದಿದೆ. ಆದರೆ, ತನಿಖೆ ದೃಷ್ಟಿಯಿಂದ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಆತ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿರುವಂತೆ ಕಾನೂನಿಗೆ ಶರಣಾಗುವುದಾದರೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.
ಇನ್ನು ಆರೋಪಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಎಂಎಲ್ ಸಿ ಶರವಣ ಹಾಗೂ ಅವರ ಜ್ಯುವೆಲ್ಲರಿ ಅಸೋಸಿಯೇಷನ್ ಸೇರಿ ಹಲವರಿಂದ ಐಎಂಎ ನಾಶವಾಯಿತು ಎಂದು ಆರೋಪಿಸಿದ್ದು, ಆತ ಹೇಳಿರುವ ಎಲ್ಲರಿಗೂ ನೋಟಿಸ್ ಜಾರಿ ಮಾಡಲು ಸಾಧ್ಯವಿಲ್ಲ. ಸೂಕ್ತ ಸಾಕ್ಷ್ಯಗಳನ್ನಾಧರಿಸಿ ವಿಚಾರಣೆ ನಡೆಸಲಾಗುತ್ತದೆ ಎಂದಿದ್ದಾರೆ.
ಆತ ಕಾನೂನಿಗೆ ಶರಣಾಗುವುದಾಗಿ, ಆತನಿಗೆ ಮತ್ತು ಕುಟುಂಬಕ್ಕೆ ಪ್ರಾಣ ಭಯ ಇದೆ ಎಂದು ಹೇಳಿಕೊಂಡಿದ್ದಾನೆ. ಕಾನೂನಿಗೆ ತಲೆಬಾಗುವುದಾದರೆ, ಸೂಕ್ತ ರಕ್ಷಣೆ ನೀಡಲಾಗುವುದು. ತನಗೆ ಬೇಕಾದ ರೀತಿಯಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ಆತ ಹೇಳಿರುವ ಎಲ್ಲಾ ಸಂಗತಿಗಳನ್ನೂ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
