ಸಿಪಿಐ ಕಚೇರಿ ಎದುರು 6 ಬೈಕ್​​ಗಳು ಬೆಂಕಿಗಾಹುತಿ!!

ಬೆಂಗಳೂರು :

      ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿಪಿಐ ಕಚೇರಿ ಮುಂದೆ ನಿಲ್ಲಿಸಲಾಗಿದ್ದ 6 ದ್ವಿಚಕ್ರ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

      ನಿನ್ನೆ ಕೇರಳದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೇಗುಲಗಳಿಗೆ ಭೇಟಿ ನೀಡಿದ್ದ ವೇಳೆ ಸಿಪಿಐ ಕಾರ್ಯಕರ್ತರು ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಐ ಕಚೇರಿ ಎದುರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗಿದೆ.

     ಘಟನೆ ಕುರಿತು ಡಿಸಿಪಿ ಚೇತನ್ ಸಿಂಗ್ ರಾಥೋರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಪಿಐ ಕಛೇರಿ ಆವರಣದಲ್ಲಿದ್ದ ಆರು ಬೈಕ್ ಗಳಿಗೆ ಬೆಂಕಿ ಇಡಲಾಗಿದೆ. ಪೆಟ್ರೋಲ್ ಹಾಕಿ ಬೆಂಕಿ ಇಟ್ಟಿದ್ದಾರೆ. ಯಾರೋ ದುಷ್ಕರ್ಮಿ ಗಳು ಬೈಕ್ ನಲ್ಲಿ ಬಂದು ತಡರಾತ್ರಿ ಒಂದು ಗಂಟೆ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದರು.

     ತಡರಾತ್ರಿ ದುಷ್ಕರ್ಮಿಗಳು ಕಛೇರಿ ಆವರಣಕ್ಕೆ ನುಗ್ಗಿದ್ದು, ಬೈಕ್ ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿ ತಗಲಿರುವುದನ್ನು ಗಮನಿಸಿದವರು ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳಕ್ಕೆ ವೈಯಾಲಿಕಾವಲ್ ಠಾಣೆ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ