ಶ್ರೀಲಂಕಾದಲ್ಲಿ 7 ಮಂದಿ ಜೆಡಿಎಸ್ ಮುಖಂಡರು ನಾಪತ್ತೆ!!

ಬೆಂಗಳೂರು :

     ಕೊಲಂಬೋದಲ್ಲಿ ಕಳೆದ ನಿನ್ನೆ ಸಂಭವಿಸಿದ ಬಾಂಬ್ ಸ್ಪೋಟಕ ಪ್ರಕರಣದಲ್ಲಿ ಸಾವನ್ನಪ್ಪಿ ಮತ್ತು ನಾಪತ್ತೆಯಾಗಿರುವ ಜೆಡಿಎಸ್ ಮುಖಂಡರ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

      ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಮತಪ್ರಚಾರ ಮುಗಿಸಿ ಶ್ರೀಲಂಕಾಗೆ ಪ್ರವಾಸಕ್ಕೆ ತೆರಳಿದ್ದ ಜೆಡಿಎಸ್ ಮುಖಂಡರು ನಾಪತ್ತೆಯಾಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಅಡಕಿಮಾರನಹಳ್ಳಿ ಗ್ರಾಮದ ಮಾರೇಗೌಡ, ಹಾರೋಕ್ಯಾತನಹಳ್ಳಿ ಪುಟ್ಟರಾಜು, ಗೋವೇನಹಳ್ಳಿ ಶಿವಣ್ಣ, ಕಾಚನಹಳ್ಳಿ ಗ್ರಾಮದ ಮುನಿಯಪ್ಪ, ಲಕ್ಷೀನಾರಾಯಣ, ಬೆಂಗಳೂರಿನ 8ನೇ ಮೈಲಿ ಹನುಮಂತರಾಯಪ್ಪ, ತುಮಕೂರಿನ ರಮೇಶ್ ಕಾಣೆಯಾದವರು.

      ಏ.20 ನೇ ತಾರೀಖಿನಂದು ಬೆಂಗಳೂರಿನಿಂದ ಶ್ರೀಲಂಕಾಕಕ್ಕೆ ತೆರಳಿದ್ದ ಇವರು ಶಾಂಗ್ರಿಲ್ಲಾ ಹೋಟೆಲ್ ತಲುಪಿದಾಗ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದರಂತೆ. ಶಾಂಗ್ರಿಲ್ಲಾ ಹೋಟೆಲ್​ಲ್ಲಿ 618, 619 ರೂಂ ನಲ್ಲಿ ತಂಗಿದ್ದರು. ಆದ್ರೆ ಬಾಂಬ್ ಸ್ಪೋಟದ ಬಳಿಕ 7 ಜನರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಪರ್ಕ ಸಿಗದ ಹಿನ್ನಲೆ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

    ‘ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ JDS ನ ಏಳು ಮಂದಿಯ ತಂಡ ಬಾಂಬ್ ಸ್ಫೋಟದ ನಂತರ ಕಾಣೆಯಾಗಿದ್ದಾರೆ. ಇದನ್ನು ಕೇಳಿ ನನಗೆ ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರ ಪತ್ತೆ ಹಚ್ಚಲು ನಾನು ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ’ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

      ಹಾಗೇ ಜೆಡಿಎಸ್​​ ವರಿಷ್ಠ ಹೆಚ್​ಡಿ ದೇವೇಗೌಡ ಕೂಡ ಟ್ವೀಟ್​ ಮಾಡಿದ್ದು, ‘ಶ್ರೀಲಂಕಾದಲ್ಲಿ ನಡೆದ ಈ ಹೇಯ ಕೃತ್ಯದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಸಂಪರ್ಕಕ್ಕೆ ಸಿಗದೇ ಕಣ್ಮರೆಯಾಗಿರುವ ಕನ್ನಡಿಗರು, ಭಾರತೀಯರು ಶೀಘ್ರವಾಗಿ ಮರಳಿ ಬರುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

Recent Articles

spot_img

Related Stories

Share via
Copy link