ಹಾಸನ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡಿನ ಪಟ್ಟಣದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆಗೆ ಭಾಗವಹಿಸಿದ್ದ 16 ವರ್ಷದ ವಿದ್ಯಾರ್ಥಿಗೆ ಸೋಂಕು ದೃಢವಾಡವಾಗಿದೆ. ಪರೀಕ್ಷೆ ಆರಂಭಕ್ಕೂ ಮುನ್ನ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದ ವಿದ್ಯಾರ್ಥಿ ನಂತರ ಚೇತರಿಸಿಕೊಂಡಿದ್ದ. ಬಳಿಕ, ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಪರೀಕ್ಷೆ ವರದಿ ಬಂದ ಬಳಿಕ ಕೊವಿಡ್ ಅಂಟಿಕೊಂಡಿರುವುದು ಖಚಿತವಾಗಿದೆ.
ಕೊರೊನಾ ಪರೀಕ್ಷೆ ವರದಿ ಹೊರಬಂದ ಕೂಡಲೇ ಆ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿದೆ. ಪರೀಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಆ ವಿದ್ಯಾರ್ಥಿಯನ್ನು ಪ್ರತ್ಯೇಕ ತರಗತಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ ಪಾಸಿಟಿವ್ ಬಂದ ವಿದ್ಯಾರ್ಥಿ ಜೊತೆ ಕೇಂದ್ರದಲ್ಲಿದ್ದ 19 ಮಕ್ಕಳು, ಒಬ್ಬರು ಶಿಕ್ಷಕರನ್ನು ನಾವು ಪ್ರತ್ಯೇಕಿಸಿದ್ದೇವೆ. ಕೊರೊನಾ ಪಾಸಿಟಿವ್ ಕಂಡು ಬಂದ ವಿದ್ಯಾರ್ಥಿಗೆ ಥರ್ಮಲ್ ಸ್ಕ್ಯಾನಿಂಗ್ನಲ್ಲಿ ಯಾವುದೇ ಲಕ್ಷಣ ಇಲ್ಲ, ಕೊರೊನಾ ಲಕ್ಷಣ ಕಂಡು ಬರದ ಹಿನ್ನೆಲೆ ಒಟ್ಟಿಗೆ ಪರೀಕ್ಷೆ ಬರೆಸಿದ್ದೆವು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಜಿಲ್ಲಾಧಿಕಾರಿ ಸಮರ್ಥನೆ ನೀಡಿದ್ದಾರೆ.
ಪರೀಕ್ಷೆ ಬರೆಯಲು ಶಾಲೆಗೆ ಬಂದ ವೇಳೆ ತಾಪಮಾನ ಪರೀಕ್ಷಿಸಿದಾಗಲೂ ಆ ವಿದ್ಯಾರ್ಥಿಗೆ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಪರೀಕ್ಷೆ ಬರೆದ 19 ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಆತಂಕ ಶುರುವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ