ಬಾಗಲಕೋಟೆ:

ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ವಿದ್ಯುತ್ ಮೋಟಾರ್ ಪಂಪ್ ಆಫ್ ಮಾಡುವ ವೇಳೆ ಕರೆಂಟ್ ಶಾಕ್ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ಮುಧೋಳ ತಾಲೂಕಿನ ಠಾಣಿಕೇರಿ ಗ್ರಾಮದ ಶಾಲೆಯೊಂದರಲ್ಲಿ ನಡೆದಿದೆ.
ಜನವರಿ 23ರಂದು ಈ ಪ್ರಕರಣ ನಡೆದಿದ್ದು, ಶಾಲೆಯ ಶಿಕ್ಷಕರು 9 ವರ್ಷದ ವಿದ್ಯಾರ್ಥಿ ಬಸವರಾಜು ಪರಸಣ್ಣವರ ಎಂಬ ವಿದ್ಯಾರ್ಥಿಗೆ ಶಾಲೆ ಶೌಚಗೃಹ ತೊಳೆಯಲು ಕಳುಹಿಸಿದ್ದರು. ಸ್ವಚ್ಛ ಮಾಡಿದ ಬಳಿಕ ತೇವಗೊಂಡ ಕೈಯಿಂದ ವಿದ್ಯುತ್ ಮೋಟಾರ್ ಬಂದ್ ಮಾಡುವಾಗ ವಿದ್ಯುತ್ ತಗುಲಿದೆ. ಆಗ ಶಿಕ್ಷಕರು ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ರಾತ್ರಿ ವಿದ್ಯಾರ್ಥಿಯನ್ನು ಮನೆಗೆ ಬಿಟ್ಟು ಬಂದಿದ್ದರು. ಅಲ್ಲಿವರೆಗೂ ಅವರ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ.
ಅದೇ ದಿನ ರಾತ್ರಿ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದಾನೆ. ಬಳಿಕ ಪೋಷಕರು ಲೋಕಾಪುರದಲ್ಲಿ ಚಿಕಿತ್ಸೆ ಕೊಡಿಸಿ, ಇದೀಗ ವಿದ್ಯಾರ್ಥಿಯನ್ನು ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಕುರಿತು ಪೋಷಕರು ಬಿಇಒ ಅಧಿಕಾರಿಗೆ ದೂರು ನೀಡಿದ್ದು, ವಿದ್ಯಾರ್ಥಿಗೆ ಗಾಯವಾಗಿದ್ದರೂ ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ಕುಟುಂಬದವರಿಗೆ ಮಾಹಿತಿ ನೀಡದಿರುವ ಕಾರಣಕ್ಕೆ ಮೂವರು ಶಿಕ್ಷಕರನ್ನು ಮುಧೋಳ ಬಿಇಒ ಸೇವೆಯಿಂದ ಅಮಾನತು ಮಾಡಿದ್ದಾರೆ.
