ದೆಹಲಿ :
ದೇಶದಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಗೆ ಕೇಂದ್ರ ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಸೋಶಿಯಲ್ ಮೀಡಿಯಾಗಳನ್ನು ಜವಾಬ್ದಾರಿಯುತವಾಗಿ ಬಳಸುವ ಬದಲು ದುರುದ್ದೇಶಗಳಿಗಾಗಿ ಅವುಗಳನ್ನು ವ್ಯಾಪಕವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠವು ಕೆಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಸಂದೇಶ ಅಥವಾ ಆನ್‌ಲೈನ್ ವಿಷಯದ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗದಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿ, ಈ ಬಗ್ಗೆ ಕೂಡಲೇ ಕೇಂದ್ರ ಸರಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ತಂತ್ರಜ್ಞಾನವು ‘ಅಪಾಯಕಾರಿ ತಿರುವು’ ತೆಗೆದುಕೊಂಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮದ ಸೋಶಿಯಲ್ ಮೀಡಿಯಾ ವ್ಯಾಪಕವಾಗಿ ದುರುಪಯೋಗವಾಗುತ್ತಿದೆ. ಊಹಪೋಹದ ಸುದ್ದಿಗಳು ಮತ್ತು ವದಂತಿಗಳನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದ್ದು, ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳು ದುರುಪಯೋಗವಾಗುವುದನ್ನು ತಡೆಗಟ್ಟಲು ಸೂಕ್ತ ಕಾನೂನು ರಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಮಂಜಸ ನಿಯಮಗಳನ್ನು ಒಳಗೊಂಡ ಕಾನೂನನ್ನು ಜಾರಿಗೆ ತರಬೇಕು. ಇದಕ್ಕಾಗಿ ಕಾರ್ಯೋನ್ಮುಖವಾಗುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ