ದೆಹಲಿ:
ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ಬುಧವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.
ರಾಜೀನಾಮೆ ಅಂಗೀಕರಿಸಲು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಾಂಗ್ರೆಸ್-ಜೆಡಿಎಸ್‌ನ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿದ್ದು, ಬುಧವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಿದೆ.
ಇಂದು ಬೆಳಗ್ಗೆ 10 ಮಂದಿ ಅತೃಪ್ತ ಶಾಸಕರ ಕುರಿತು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು. ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಕೂಡಲೇ ಅಂಗೀಕರಿಸಬೇಕು ಎಂದು ವಾದಿಸಿದ್ದರು. ಅವರ ವಾದ ಮುಕ್ತಾಯವಾದ ನಂತರ ಸ್ಪೀಕರ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ಮಂಡಿಸಿದ್ದರು.
ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ. ಸ್ಪೀಕರ್ ಅವರು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ ಎಂದು ಸಿಂಘ್ವಿ ಪ್ರತಿವಾದ ಮಂಡಿಸಿದ್ದರು.
Supreme Court to pass order in Karnataka rebel MLAs case tomorrow at 10:30 am. pic.twitter.com/eEX0oqpAJO
— ANI (@ANI) July 16, 2019
ಶಾಸಕರು ರಾಜೀನಾಮೆ ನೀಡಿ ಇಷ್ಟು ದಿನ ಕಳೆದರೂ ಸ್ಪೀಕರ್ ರಾಜೀನಾಮೆ ಯಾಕೆ ಸ್ವೀಕರಿಸಿಲ್ಲ. ನಾವು ಸ್ಪೀಕರ್ ಅವರ ಕಾರ್ಯವ್ಯಾಪ್ತಿಯನ್ನು ಪ್ರಶ್ನಿಸುವುದಿಲ್ಲ. ಆದರೆ ನೀವು ನಿಮ್ಮ ಅನುಕೂಲತೆಗೆ ತಕ್ಕಂತೆ ನಮ್ಮನ್ನು ಪ್ರಶ್ನಿಸುವಂತಿಲ್ಲ ಎಂದು ಸಿಜೆಐ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಮಧ್ಯಾನ ಭೋಜನ ವಿರಾಮದ ನಂತರ ಸಿಎಂ ಕುಮಾರಸ್ವಾಮಿ ಪರ ವಕೀಲರಾದ ರಾಜೀವ್ ಧವನ್ ವಾದ ಮಂಡಿಸಿ, ಶಾಸಕರು ಸಚಿವರಾಗುವ ಆಮಿಷಕ್ಕೊಳಗಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ. ಗುರುವಾರ ಅಧಿವೇಶನ ನಡೆಯಲಿದ್ದು, ಅಂದು ಹಣಕಾಸು ವಿಧೇಯಕ ಮಂಡನೆಯಾಗಲಿದೆ. ಇಂತಹ ಸಂದರ್ಭದಲ್ಲಿ ಶಾಸಕರು ಸರ್ಕಾರವನ್ನು ಬೀಳಿಸುವ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಇಂತಹ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಬಾರದು ಎಂದು ವಾದ ಮಂಡಿಸಿದ್ದರು.
ಸುದೀರ್ಘವಾಗಿ ವಾದ, ಪ್ರತಿವಾದ ಆಲಿಸಿದ ಸಿಜೆಐ ನೇತೃತ್ವದ ಸುಪ್ರೀಂಕೋರ್ಟ್ ಪೀಠ ತೀರ್ಪನ್ನು ಕಾಯ್ದಿರಿಸಿದ್ದು, ಬುಧವಾರ ಬೆಳಗ್ಗೆ 10-30ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.
ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಬಂದಾಗ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅರಿಯಲೆಂದು ತ್ರಿಸದಸ್ಯ ಪೀಠದಲ್ಲಿ ಮಂಗಳವಾರ 10:40ಕ್ಕೆ ಆರಂಭಗೊಂಡ ವಿಚಾರಣೆ ಮಧ್ಯಾಹ್ನ 3:24ರವರೆಗೆ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ