ಮಂಡ್ಯ :
ಯುವಕನೊಬ್ಬ ತನ್ನ ಸಾಲ ತೀರಿಸಲು ತನ್ನ ಟೀ ಅಂಗಡಿ ಮುಂದೆ ಕಿಡ್ನಿ ಮಾರಾಟಕ್ಕಿದೆ ಎಂಬ ಫಲಕ ಹಾಕಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ನಗರದ ಫ್ಯಾಕ್ಟರಿ ಸರ್ಕಲ್ ನ 26 ವರ್ಷದ ವಿನೋದ್ ಕುಮಾರ್ ಎಂಬ ಯುವಕನೇ ಈ ರೀತಿ ಬೋರ್ಡ್ ಹಾಕಿರುವ ವ್ಯಕ್ತಿಯಾಗಿದ್ದಾನೆ.
ಮನೆ ಕಟ್ಟಲು ಮತ್ತು ಇತರ ಕಾರಣಗಳಿಗೆ ಸಾಲ ಮಾಡಿದ್ದ ವಿನೋದ್ ಕುಮಾರ್, ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಜಮೀನು ಅಡವಿಡಲು ಮುಂದಾಗಿದ್ದ. ಜಮೀನಿನ ಸ್ಕೆಚ್ ಕೊಡಲು ಅಧಿಕಾರಿಗಳು ಲಂಚ ಕೇಳುತ್ತಾರೆ. ಲಂಚ ಕೊಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ ನನ್ನ ಕಿಡ್ನಿ ಮಾರಿ ಸಾಲ ತೀರಿಸುವ ನಿರ್ಧಾರ ಮಾಡಿದ್ದೇನೆ ಎಂದು ಯುವಕ ತಿಳಿಸಿದ್ದಾನೆ.
ಕಿಡ್ನಿ ಬೇಕಾದವರು ನನಗೆ ಹಣ ನೀಡಿ ಕೊಂಡುಕೊಳ್ಳಿ ಎಂದು ಚೀಟಿ ಬರೆದು ತನ್ನ ಅಂಗಡಿ ಮುಂದೆ ಅಂಟಿಸಿರುವ ವಿನೋದ್ ನಿರ್ಧಾರಕ್ಕೆ ಸ್ಥಳೀಯರು ಬುದ್ಧಿಮಾತು ಹೇಳಿದ್ದಾರೆ. ಯಾರ ಮಾತಿಗೂ ಕಿವಿಕೊಡದ ವಿನೋದ್, ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಇಷ್ಟ ಇಲ್ಲ. ಹೀಗಾಗಿ ಕಿಡ್ನಿ ಮಾರಿ ಸಾಲ ತೀರಿಸಲು ಮುಂದಾಗಿದ್ದೇನೆ ಎಂದು ಹೇಳುತ್ತಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
