ಬೆಂಗಳೂರು:
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವುದು ಕೊನೆಗೂ ಫೈನಲ್ ಆಗಿದೆ. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್ ನೀಡಿರುವುದು ಕಾರ್ಯಕರ್ತರನ್ನು ಅಚ್ಚರಿಯ ಜತೆಗೆ ಅಸಮಾಧಾನಕ್ಕೆ ದೂಡಿದೆ.
ಈ ಮೊದಲು ಈ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ರನ್ನು ಕಣಕ್ಕಿಳಿಸಲಾಗುತ್ತೆ ಎನ್ನಲಾಗಿತ್ತು. ಆದರೆ, ಇದೀಗ ಕೇಂದ್ರ ಚುನಾವಣಾ ಸಮಿತಿ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಿದೆ.
ತೇಜಸ್ವಿನಿ ಅನಂತ ಕುಮಾರ್ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿಕೆಲ ಬಿಜೆಪಿ ಕಾರ್ಯಕರ್ತರು ದಿ. ಅನಂತ್ ಕುಮಾರ್ ಮನೆ ಮುಂದೆ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೊಡುವುದಾಗಿ ಹೇಳಿ ಮೋಸ ಮಾಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಬಸವನಗುಡಿಯ ಶಾಸಕ ರವಿ ಸುಬ್ರಮಣ್ಯ ರವರಿಗೆ ಬಿ ಫಾರಂ ಕೊಡಬಹುದು ಎಂದು ತಿಳಿದು ಬಂದಿತ್ತು. ಆದರೆ ಅಚ್ಚರಿ ಎಂಬಂತೆ ರವಿ ಸುಬ್ರಮಣ್ಯ ಅವರ ಅಣ್ಣನ ಮಗ ವಕೀಲ ಮತ್ತು ಬಿಜೆಪಿ ಯುವ ಮುಖಂಡ ತೇಜಸ್ವಿ ಸೂರ್ಯಗೆ ಹೈಕಮಾಂಡ್ ಮಣೆ ಹಾಕಿದ್ದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಮುಂದಿನ ದಿನಗಳಲ್ಲಿ ತೇಜಸ್ವಿನಿ ಅನಂತಕುಮಾರ್ ರವರಿಗೆ ಉತ್ತಮ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಅಂತೂ ಕೊನೆಗೂ ಇಲ್ಲಿ ತೇಜಸ್ವಿನಿಗೆ ಟಿಕೆಟ್ ಸಿಗಲೇ ಇಲ್ಲ. ಅದರ ಬದಲು ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿರುವುದು ತೇಜಸ್ವಿನಿ, ಅನಂತಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ