‘ಮಧ್ಯಂತರ ಚುನಾವಣೆ ಪ್ರಶ್ನೆಯೇ ಇಲ್ಲ’- ದೇವೇಗೌಡ

ಬೆಂಗಳೂರು:

      ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು ಈ ಹಿನ್ನೆಲೆಯಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಪ್ರಶ್ನೆ ಇಲ್ಲ ಎಂದು ಜೆಡಿಎಸ್‌ ವರಿಷ್ಟ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

      ಪಕ್ಷದ ಕಛೇರಿಯಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ನಾನು ಯಾರ ಬಳಿಯೂ ಮಾತನಾಡಿಲ್ಲ. ಇನ್ನೇನಿದ್ದರೂ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ಗಳಿಗೆ ಚುನಾವಣೆ ನಡೆಯುತ್ತದೆ. ಆ ಚುನಾವಣೆಗಳಿಗೆ ಸಜ್ಜಾಗುತ್ತೇವೆಯೇ ವಿನ: ಮಧ್ಯಂತರ ಚುನಾವಣೆಯ ಮಾತೇ ಇಲ್ಲ ಎಂದರು.

      ಸರ್ಕಾರ ಸುಗಮವಾಗಿ ಸಾಗಲಿ ಎಂಬ ಕಾರಣಕ್ಕಾಗಿ ಜೆಡಿಎಸ್‌ ಕೋಟಾದ ಒಂದು ಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ ಗೆ ಬಿಟ್ಟುಕೊಟ್ಟಿದ್ದೇವೆ. ಹಾಗೆಯೇ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಯಾರೂ ಮಾತನಾಡದಂತೆ ನೋಡಿಕೊಳ್ಳಿ ಎಂದು ಹೇಳಿದ್ದೇವೆ. ಹೀಗಾಗಿ ಇನ್ನು ಮುಂದೆ ಸರ್ಕಾರ ಸುಗಮವಾಗಿ ಸಾಗುವ ಕಡೆಗಷ್ಟೇ ನಮ್ಮ ಗಮನ ಎಂದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಾರೆ. ಇನ್ನು ಮುಂದೆ ಅಂತಹ ಕಾರ್ಯಕ್ರಮಗಳ ಕಡೆ, ಜನರ ಕೆಲಸ ಮಾಡುವ ಕಡೆ ಗಮನ ನೀಡಲಾಗುವುದೇ ಹೊರತು ಬೇರೆ ಯಾವ ವಿಷಯಗಳ ಬಗೆಗೂ ಅಲ್ಲ ಎಂದರು.

      ದೆಹಲಿಗೆ ಹೋದಾಗ ನಾನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಬಳಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಬಗ್ಗೆ ದೂರು ನೀಡಿದ್ದೇನೆ ಎಂಬುದು ಸುಳ್ಳು. ಅದರ ಬದಲು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ರಾಹುಲ್‌ಗಾಂಧಿ ಅವರಿಗೆ ಹೇಳಿ ಬಂದಿದ್ದೇನೆ ಎಂದರು.

      ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಕಡೆ ಗಮನ ನೀಡುತ್ತೇವೆ. ಇದೇ ಉದ್ದೇಶದಿಂದ 23 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆ ಕರೆಯಲಾಗಿದೆ. ದಿನ ದಿನಗಳಲ್ಲಿ ಎದುರಿಸಬೇಕಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಪಂಚಾಯತ್‌ ಚುನಾವಣೆಯ ಕಡೆ ನೋಡುತ್ತೇವೆ. ಅದೇ ನಮ್ಮ ಆದ್ಯತೆ ಎಂದರು.

      ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್‌ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸ್ಥಾನದಲ್ಲಿ ಮುಂದುವರಿಯುವಂತೆ ಅವರನ್ನು ಮರಳಿ ಕೇಳಿಕೊಳ್ಳಲಾಗುವುದು ಎಂದರು.

      ಹಿಂದುಳಿದ ವರ್ಗಗಳ ಸಭೆ ಕರೆದು ವಿಶ್ವನಾಥ್‌ ಅವರ ರಾಜೀನಾಮೆ ವಿಷಯದ ಬಗ್ಗೆ ನಿರ್ಧರಿಸುವುದೂ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳುವುದಾಗಿ ವಿವರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap