ಮಂಡ್ಯ:
ಕಾರು ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಲು ಹೋದವರೇ ಸಾವಿಗೀಡಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಣಿಗೆರೆ ಗ್ರಾಮದ ದೇವರಾಜು(35), ಬಿದರಹೊಸಹಳ್ಳಿಯ ಪ್ರಸನ್ನ(50), ಪ್ರದೀಪ್ (25) ಮೃತಪಟ್ಟವರಾಗಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗೇಟ್ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದವರು ಚೀರಾಡುತ್ತಿದ್ದುದನ್ನು ಗಮನಿಸಿದ ಮೂವರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ, ಸ್ಥಳದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಗಮನಿಸದೇ ಅದನ್ನು ತುಳಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಮಳವಳ್ಳಿಯಿಂದ ಕೆಎಂ ದೊಡ್ಡಿ ಕಡೆಗೆ ಸಾಗುತ್ತಿತ್ತು. ಮಣಿಗೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತಕ್ಕೀಡಾದವರ ರಕ್ಷಣೆಗೆ ಹೋದವರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಬಳಿಕ ಸ್ಥಳೀಯರು ಕೂಡಲೇ ಸೆಸ್ಕ್ ಸಿಬ್ಬಂದಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಗಾಯಾಳುಗಳನ್ನು ಕೆ.ಎಂ.ದೊಡ್ಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ