ದಾವಣಗೆರೆ :
ಇಂದಿಗೂ ದೇಶದಲ್ಲಿ ದೇವದಾಸಿ, ಸತಿಸಹಗಮನ, ಬೆತ್ತಲೆ ಸೇವೆಗಳಂತಹ ಅನಿಷ್ಟ ಪದ್ಧತಿಗಳು ಜೀವಂತವಾಗಿವೆ ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣಕುಮಾರ್ ವಿಷಾದ ವ್ಯಕ್ತಪಡಿಸಿದರು.ನಗರದ ಜಿಲ್ಲಾಡಳಿತದ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಹಯೋಗದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗಾಗಿ ಏರ್ಪಡಿಸಿದ್ದ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ-ಸಾಮಥ್ರ್ಯ ಅಭಿವೃದ್ಧಿ’ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾಹಿತಿ ನೀಡಿದರು.
ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ದೇವದಾಸಿ, ಸತಿಸಹಗಮನ ಮತ್ತು ಬೆತ್ತಲೆ ಸೇವೆಗಳಂತಹ ಅನಿಷ್ಟ ಪದ್ಧತಿಗಳು ಇಂದಿಗೂ ನಮ್ಮಲ್ಲಿ ಜೀವಂತವಾಗಿವೆ. ಮಹಿಳೆಯರನ್ನು ಒಂದು ಭೋದಗ ವಸ್ತುವಿನಂತೆ ನೋಡಲಾಗುತ್ತಿದೆ. ಮಹಿಳಾ ದೌರ್ಜನ್ಯ ತಡೆಗಟ್ಟಲು ಎಷ್ಟೇ ಕಾನೂನುಗಳು ಜಾರಿಗೆ ಬಂದರೂ ಪುರುಷ ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ ಎಂದು ಹೇಳಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ಅರಿವು ಶಿಕ್ಷಕರಿಗೆ ಅಗತ್ಯವಾಗಿ ಇರಬೇಕು. ಗ್ರಾಮೀಣ ಪ್ರದೇಶದ ಸಮಸ್ಯೆಗಳ ಅರಿವಿನೊಂದಿಗೆ ಮಕ್ಕಳ ದೌರ್ಜನ್ಯಗಳ ಬಗೆಗಿನ ತಿಳುವಳಿಕೆ ಶಿಕ್ಷಕರಿಗೆ ಅವಶ್ಯ. ಪ್ರಸ್ತುತ ಜನರಿಗೆ ಆಸ್ಪತ್ರೆ ಮತ್ತು ನ್ಯಾಯಲಯಗಳೆರಡೂ ಅನಿವಾರ್ಯವಾಗಿದೆ. ಗರ್ಭದಿಂದ ಹಿಡಿದು ಗೋರಿಯವರೆಗೆ ಕಾನೂನು ಮುಖ್ಯವಾಗಿ ಬೇಕಾಗಿದೆ ಎಂದು ಹೇಳಿದರು.
ಪೋಕ್ಸೊ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಗಳು ಮಕ್ಕಳಿಗೆ ಸಂಬಂಧಪಟ್ಟ ಕಾಯ್ದೆಗಳಾಗಿದ್ದು, ಸಮಾಜದ ಕಟ್ಟ ಕಡೆಯ ಮಕ್ಕಳಿಗೂ ನೆರವಾಗಬೇಕಿದೆ. ಇದಕ್ಕಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ಎಲ್ಲಾ ಇಲಾಖೆಗಳೂ ಒಂದಾಗಿ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಮೂಲ ಅಸ್ತ್ರವಾಗಿದೆ. ಶಿಕ್ಷಕರಂತೆ ಸಮಾಜ ವಿರಲಿದ್ದು, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಗ್ರಾಮದಲ್ಲಿ ಶಾಲೆ ಹಾಗೂ ದೇವಸ್ಥಾನದ ಘಂಟೆ ಸರಿಯಾಗಿದ್ದರೆ ಅಲ್ಲಿ ಎಲ್ಲವೂ ಸುವ್ಯವಸ್ಥೆಯಾಗಿದೆ ಎಂದರ್ಥ. ಮಕ್ಕಳು ಕಲಿಯುವ ವಯಸ್ಸಿನಲ್ಲಿ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತಂದು ಶಿಕ್ಷಣ ನೀಡಬೇಕೆಂದು ಸೂಚನೆ ನೀಡಿದರು.
ಮಕ್ಕಳು ಕಲಿಕೆಯಿಂದ ಹೊರಗುಳಿದು ಸಮಾಜಘಾತುಕ ಶಕ್ತಿಯಾಗಿ ಬೆಳೆಯಬಾರದು ಎಂಬ ಉದ್ದೇಶದಿಂದ ಸರ್ಕಾರದಿಂದ ಒಂದರಿಂದ ಒಂಭತ್ತನೇ ತರಗತಿಯವರೆಗಿನ ಮಕ್ಕಳನ್ನು ಅನುತ್ತೀರ್ಣ ಮಾಡದಂತೆ ಆದೇಶವನ್ನು ಹೊರಡಿಸಲಾಗಿದೆ. ಇದರಿಂದ ಮಕ್ಕಳು ಶಾಲೆಯಲ್ಲಿ ಉಳಿಯಲು ಅನುಕೂಲವಾಗಿದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ವೈ.ರಾಮ ನಾಯ್ಕ ಮಾತನಾಡಿ, ಸಂಕಷ್ಟದಲ್ಲಿರುವ 18 ವರ್ಷದ ಒಳಗಿನ ಮಕ್ಕಳಿಗೆ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಸೂಕ್ತ ಶಿಕ್ಷಣ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ನಿರ್ಗತಿಕ ಮತ್ತು ದೌಜನ್ಯಕ್ಕೆ ಒಳಪಟ್ಟ ಮಕ್ಕಳು ಶಿಕ್ಷಣ ಮುಂದುವರಿಸಲು ಇಚ್ಛಿಸಿದಲ್ಲಿ ಅವರಿಗೂ ಸಹ ಉನ್ನತ ಶಿಕ್ಷಣವನ್ನು ನೀಡಲಾಗುವುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್.ವಿಜಯ್‍ಕುಮಾರ್, 18 ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡುವುದರಿಂದ ಪೋಷಕರಿಗೆ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ಶಿಕ್ಷಣ ಕೊಡಿಸುವ ಜವಾಬ್ದಾರಿ ತಪ್ಪಲಿದೆ ಎಂಬ ಕಾರಣಕ್ಕೆ ಮದುವೆ ಮಾಡಲು ಮುಂದಾಗುತ್ತಾರೆ. ಬಾಲ್ಯವಿವಾಹವಾದ 18 ವರ್ಷದೊಳಗಿನ ಹೆಣ್ಣುಮಕ್ಕಳು ಗರ್ಭಿಣಿಯ ರಾದರೆ ಜನಿಸುವ ಮಕ್ಕಳು ಅಪೌಷ್ಠಿಕ, ಬುದ್ದಿಮಾದ್ಯ, ಅಂಗವಿಕಲತೆಯಷ್ಟೇ ಅಲ್ಲದೆ ಶಿಶುಮರಣ ಹಾಗೂ ತಾಯಿಮರಣವಾಗುವ ಸಾಧ್ಯತೆಗಳು ಹೆಚ್ಚಿವೆ.
ಅಲ್ಲದೇ ಗಂಡ ಸತ್ತುಹೋದಲ್ಲಿ ವಿಧವೆಯಾಗಿ ಹಿಂದು ಸಂಸ್ಕೃತಿಯಲ್ಲಿ ಮರು ಮದುವೆಗೆ ಅವಕಾಶವಿಲ್ಲದೇ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ ಒಬ್ಬಂಟಿಯಾಗಿ ಜೀವನ ನಡೆಸುವ ಸಂಕಷ್ಟಗಳು ಎದುರಾಗಲಿವೆ ಎಂದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಹಾವೇರಿ ಜಿಲ್ಲೆಯ ಪೊಲೀಸ್ ಇಲಾಖೆಯ ಮಲ್ಲಪ್ಪ ಜಲಗಾರ್ ಸೇರಿದಂತೆ ಜಿಲ್ಲೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.