ವಿವಾದ ಸೃಷ್ಟಿಸಿದ್ದ ರೇವಣ್ಣ ವರ್ಗಾವಣಾ ಪರ್ವ

ಬೆಂಗಳೂರು:

     ಇತ್ತೀಚೆಗೆ ಲೋಕೋಪಯೋಗಿ ಸೇರಿ ವಿವಿಧ ಇಲಾಖೆಗಳಲ್ಲಿ ಭಾರೀ ವರ್ಗಾವರ್ಗಿ ನಡೆಸಿ ವಿವಾದ ಸೃಷ್ಟಿಸಿದ್ದ ಸಚಿವ ಎಚ್.ಡಿ. ರೇವಣ್ಣ ಅವರ ಕ್ರಮ ಇದೀಗ ಹಿಂದುಳಿದ ವರ್ಗಗಳ ಅಧಿಕಾರಿ ವಲಯದಲ್ಲಿ ಅಸಹನೀಯ ವಾತಾವರಣ ಸೃಷ್ಟಿಸಿದೆ.

       ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆಯಾಕಟ್ಟಿನ ಹುದ್ದೆಗಳನ್ನು ಹುಡುಕಿಕೊಂಡಿದ್ದ ಹಿಂದುಳಿದ ವರ್ಗಗಳ ಅಧಿಕಾರಿಗಳನ್ನು ರೇವಣ್ಣ ಒಬ್ಬೊಬ್ಬರನ್ನೇ ಪತ್ತೆ ಮಾಡಿ ಎತ್ತಂಗಡಿ ಮಾಡಿರುವುದು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

     ಇತ್ತೀಚೆಗೆ 470ಕ್ಕೂ ಹೆಚ್ಚು ಇಂಜಿನಿಯರ್‍ಗಳನ್ನು ರೇವಣ್ಣ ರಾತ್ರೋರಾತ್ರಿ ವರ್ಗಾವಣೆ ಮಾಡಿದ್ದರು. ಈ ಪೈಕಿ ಬಹುತೇಕ ಮಂದಿ ಹಿಂದುಳಿದ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.

     ತಮಗೆ ಬೇಕಾದವರನ್ನು ಆಯಕಟ್ಟಿನ ಹುದ್ದೆಗಳಲ್ಲಿ ಕೂರಿಸಲು ಭಾರೀ ವರ್ಗಾವಣೆ ಮಾಡಿದ್ದಾರೆ. ಜತೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ತಮಗೆ ಅಸಹಾಕಾರ ತೋರಿದ ಅಧಿಕಾರಿಗಳನ್ನು ಪತ್ತೆ ಮಾಡಿ ವರ್ಗಾವಣೆ ಮಾಡಿದ್ದಾರೆ ಎನ್ನುವ ದೂರುಗಳು ಸಹ ಕೇಳಿ ಬಂದಿವೆ.

    ರೇವಣ್ಣ ಅವರ ವರ್ತನೆಯ ಬಗ್ಗೆ ಬಹುತೇಕ ಸಚಿವರು, ಶಾಸಕರು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲೂ ಸಹ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

   ರೇವಣ್ಣ ಅವರಿಗೆ ವರ್ಗಾವಣೆ ಮಾಡುವ ಕಲೆ ಸಿದ್ಧಸಿದೆ. ನಮಗೆ ಗೊತ್ತಿಲ್ಲದಂತೆ ನಮ್ಮ ಇಲಾಖೆಗಳಲ್ಲಿ ಇಂಜಿನಿಯರ್‍ಗಳ ವರ್ಗಾವಣೆಯಾಗುತ್ತಿದೆ. ಇದರಿಂದ ಆಡಳಿತಾತ್ಮಕವಾಗಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು.

    ಇನ್ನು ಕಾಂಗ್ರೆಸ್ ಶಾಸಕರು ಸಹ ಈ ಬೆಳವಣಿಗೆಯಿಂದ ರೋಸಿಹೋಗಿದ್ದಾರೆ. ಸಚಿವರು ಮತ್ತು ತಮ್ಮ ಆಪ್ತರ ಬಳಿ ವರ್ಗಾವಣೆ ಬಗ್ಗೆ ತಾವು ಎದುರಿಸುತ್ತಿರುವ ಮುಜುಗರವನ್ನು ತೋಡಿಕೊಂಡಿದ್ದಾರೆ.

      ವರ್ಗಾವಣೆ ಬಗ್ಗೆ ಅಧಿಕಾರಿ ವರ್ಗದಲ್ಲೂ ತಳಮಳ ಸೃಷ್ಟಿಯಾಗಿದೆ. ಆದರೆ ಬಹಿರಂಗವಾಗಿ ಮಾತನಾಡಲು ಬಹುತೇಕರು ಹಿಂಜರಿಯುತ್ತಿದ್ದಾರೆ. ನಾಳೆ ನಮ್ಮ ಸರದಿ ಬರಬಹುದು ಎನ್ನುವ ಆತಂಕ ಹಿಂದುಳಿದ ವರ್ಗಗಳ ಅಧಿಕಾರಿಗಳಲ್ಲಿ ಮನೆ ಮಾಡಿದೆ.

    ಸಚಿವರು, ಶಾಸಕರು, ಅಧಿಕಾರಿ ವಲಯವಷ್ಟೇ ಅಲ್ಲದೇ ಬಿಜೆಪಿ ನಾಯಕರು ಸಹ ರೇವಣ್ಣ ಅವರು ನಡೆಸುತ್ತಿರುವ ವರ್ಗಾವಣೆಯ ಬಗ್ಗೆ ಕೆಂಡಮಂಡಲವಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link