ಬೆಳಗಾವಿ:
ಮದುವೆ ಮನೆಯಲ್ಲಿ ಮಲಗಿದ್ದ ತಂದೆ-ತಾಯಿ, ಮಗನನ್ನು ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ನಡೆದಿದೆ.
ಶಿವಾನಂದ ಅಂದಾನಶೆಟ್ಟಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಆತನ ಮಡದಿ ಶಾಂತವ್ವ, ಪುತ್ರ ವಿನೋದ್ ಅಂದಾನಶೆಟ್ಟಿ ಮೃತರು.
ನಿನ್ನೆ ಐದರಿಂದ ಆರು ಜನರ ದುಷ್ಕರ್ಮಿಗಳ ತಂಡ ಮನೆ ಬಾಗಿಲು ತೆಗೆಸಿ ಒಳ ನುಗ್ಗಿದ್ದಾರೆ. ಬಾಗಿಲು ತೆಗೆದ ಮನೆ ಮಾಲೀಕನ ತಲೆಗೆ ರಾಡ್ ನಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ ಬಳಿಕ ಒಳ ನುಗ್ಗಿ ಕೋಣೆಯಲ್ಲಿ ಮಲಗಿದ್ದ ಮಗ ವಿನೋದ್ ತಲೆಗೆ ಹೊಡೆದು ಸಾಯಿಸಿದ್ದಾರೆ. ಬಳಿಕ ಪಕ್ಕದ ಕೋಣೆಗೆ ತೆರಳಿ ತಾಯಿ ಶಾಂತವ್ವಾಗೆ ತಲೆಯ ಹಿಂಭಾಗಕ್ಕೆ ಹೊಡೆದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಮುಂಜಾನೆ ನೆರೆಹೊರೆಯವರು ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದೊಡ್ಡವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತ ಶಿವಾನಂದ ಮತ್ತು ಶಾಂತವ್ವ ತಮ್ಮ ಮಗ ವಿನೋದ್ ಮದುವೆಯನ್ನು ಇದೇ ತಿಂಗಳ 30 ರಂದು ಫಿಕ್ಸ್ ಮಾಡಿದ್ದರು. ಹೀಗಾಗಿ ಕುಟುಂಬದವರು ಮದುವೆ ಸಂಭ್ರಮದಲ್ಲಿದ್ದರು. ಆದರೆ ರಾತ್ರೋರಾತ್ರಿ ಒಂದು ಕುಟುಂಬವನ್ನೇ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಒಂದು ವರ್ಷದ ಹಿಂದೆ ಶಿವನಂದ ಸಹೋದರ ಆಸ್ತಿ ವಿಚಾರಕ್ಕೆ ಕೊಲೆ ಯತ್ನ ನಡೆಸಿದ್ದನಂತೆ. ಶಿವಾನಂದ ಮನೆಯ ಪಕ್ಕದಲ್ಲಿ ಖುಲ್ಲಾ ಜಾಗಕ್ಕೆ ಆಗಾಗ ಜಗಳ ಕೂಡ ಆಗುತ್ತಿತ್ತು ಇದೇ ವಿಚಾರಕ್ಕೆ ಕೊಲೆಯಾಗಿದೆ ಎಂಬ ಶಂಕೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕೊಲೆಗೆ ಆಸ್ತಿ ವಿಚಾರವೇ ಕಾರಣ ಎನ್ನಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
