ತುಮಕೂರು: ನಗರಕ್ಕೆ ಬಂದ 7 ಕಾರ್ಮಿಕರಿಗೆ ಕ್ವಾರಂಟೈನ್!!

 ತುಮಕೂರು:

      ಜೀವನೋಪಾಯಕ್ಕಾಗಿ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ, ಮೂಲತಃ ತುಮಕೂರು ನಗರಕ್ಕೆ ಸೇರಿದ ಏಳು ಜನ ಕಾರ್ಮಿಕರು ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಮತ್ತೆ ತುಮಕೂರು ನಗರಕ್ಕೆ ವಾಪಸ್ಸಾಗಿದ್ದು, ಅವರನ್ನು ಜಿಲ್ಲಾಡಳಿತ ಮತ್ತು ತುಮಕೂರು ಮಹಾನಗರ ಪಾಲಿಕೆಯು 14 ದಿನಗಳ ಕ್ವಾರಂಟೈನ್‍ಗೆ ಒಳಪಡಿಸಿದೆ.

      ತುಮಕೂರು ನಗರದ ಬಸವೇಶ್ವರ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಆಗಮನಕ್ಕಾಗಿ ಮೇ 9 ರಿಂದ ವ್ಯವಸ್ಥೆ ಮಾಡಲಾಗಿದೆ. ತುಮಕೂರು ತಹಸೀಲ್ದಾರ್ ಹಾಗೂ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಪ್ರತ್ಯೇಕ ತಂಡಗಳು ಅಲ್ಲಿದ್ದು, ತುಮಕೂರು ನಗರಕ್ಕೆ ಆಗಮಿಸುವ ಕಾರ್ಮಿಕರ ಬಗ್ಗೆ ಗಮನ ನೀಡಿವೆ.

3 ಸ್ಥಳಗಳಲ್ಲಿ ಕ್ವಾರಂಟೈನ್:

      ಮೇ 9 ರಿಂದ ಈವರೆಗೆ 7 ಕಾರ್ಮಿಕರು ಕೆ.ಎಸ್.ಆರ್.ಟಿ.ಸಿ. ಬಸ್‍ನಲ್ಲಿ ಇಲ್ಲಿಗೆ ಆಗಮಿಸಿದ್ದಾರೆ. ಮೊದಲನೇ ದಿನ ಗುಜರಾತ್‍ನ ಅಹಮದಾಬಾದ್‍ನಿಂದ ಓರ್ವ ಕಾರ್ಮಿಕ ಆಗಮಿಸಿದ್ದು, ಅವರನ್ನು ಮೆಳೆಕೋಟೆಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

      ಎರಡನೇ ದಿನ ಕೇರಳ ರಾಜ್ಯದಿಂದ ಮೂವರು ಕಾರ್ಮಿಕರು ಆಗಮಿಸಿದ್ದು, ಅವರನ್ನು ನಗರದ ಅಶೋಕ ನಗರದಲ್ಲಿರುವ ಖಾಸಗಿ ಲಾಡ್ಜ್‍ನಲ್ಲಿ ಕ್ವಾರಂಟೈನ್‍ಗಾಗಿ ಇರಿಸಲಾಗಿದೆ.
ಆನಂತರದಲ್ಲಿ ಮಹಾರಾಷ್ಟ್ರದ ಪೂನಾದಿಂದ ಇಬ್ಬರು ಕಾರ್ಮಿಕರು ಮತ್ತು ರಾಜಸ್ಥಾನದಿಂದ ಒಬ್ಬ ಕಾರ್ಮಿಕ ತುಮಕೂರಿಗೆ ಹಿಂತಿರುಗಿದ್ದು, ಸದರಿ ಮೂವರನ್ನು ನಗರದ ಎಸ್ಸಿ-ಎಸ್ಟಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಈ ಏಳೂ ಜನ ಕಾರ್ಮಿಕರು ತುಮಕೂರು ನಗರದ ನಿವಾಸಿಗಳಾಗಿದ್ದಾರೆ. 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಇವರೆಲ್ಲರಿಗೂ ಜಿಲ್ಲಾಡಳಿತವು ವೈದ್ಯಕೀಯ ತಪಾಸಣೆ ಮತ್ತು ಊಟೋಪಹಾರಗಳ ವ್ಯವಸ್ಥೆಯನ್ನು ಮಾಡಿದೆ.

ಹೈರಿಸ್ಕ್ ರಾಜ್ಯ : ವಿಶೇಷ ನಿಗಾ:

      ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಆಗಮಿಸುವ ವಲಸೆ ಕಾರ್ಮಿಕರನ್ನು ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಅಲ್ಲಿ ರೋಗಲಕ್ಷಣಗಳು ಕಾಣಿಸಿದರೆ ತಕ್ಷಣವೇ ಅಂಥವರನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಿಸಲಾಗುವುದು. ಅದೇನೂ ಇಲ್ಲದೆ ಆರೋಗ್ಯ ಸಹಜವಾಗಿದ್ದರೆ ಅಂಥವರನ್ನು ಇನ್ಸ್‍ಟಿಟ್ಯೂಷನಲ್ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು.

      ಎಲ್ಲರಿಗೂ ಅವರ ಮುಂಗೈ ಮೇಲೆ ಕ್ವಾರಂಟೈನ್ ಸೀಲ್ ಹಾಕಲಾಗುವುದು ಹಾಗೂ ಅವರನ್ನು ಇರಿಸುವ ಸ್ಥಳದಲ್ಲಿ ಪ್ರಕಟಣೆ ಹಾಕಲಾಗುವುದು. ಕ್ವಾರಂಟೈನ್‍ಗೆ ಒಳಪಡುವವರೆಲ್ಲರೂ ಸಿಬ್ಬಂದಿಯ ಕಣ್ಗಾವಲಿನಲ್ಲೇ ಇರಲಿದ್ದಾರೆ. ಕೊರೊನಾ ದೃಷ್ಟಿಯಲ್ಲಿ ಹೈರಿಸ್ಕ್ ರಾಜ್ಯಗಳೆಂದು ಗುರುತಿಸಲ್ಪಟ್ಟಿರುವ ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿನಿಂದ ಆಗಮಿಸುವವರ ಬಗ್ಗೆ ವಿಶೇಷ ನಿಗಾ ಇರಿಸಲಾಗುತ್ತಿದೆ ಎನ್ನುತ್ತಾರೆ ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap