ತುಮಕೂರು:
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಅವರು ಪರಮೇಶ್ವರ್ ಅವರನ್ನು ಓಲೈಸಿಕೊಳ್ಳುವ ದೃಷ್ಠಿಯಿಂದ ಕೆ.ಎನ್.ರಾಜಣ್ಣ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆರ್.ರಾಜೇಂದ್ರ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಮಾತನಾಡಿದ ಅವರು, ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದ ಕೆ.ಎನ್.ರಾಜಣ್ಣ ಅವರ ತೇಜೋವಧೆ ಮಾಡಲಾಗುತ್ತಿದೆ. ನೇರವಾಗಿ ಮಾತನಾಡಲಾಗದೆ, ಹಿಂಬಾಲಕರಿಂದ ಸ್ಥಳೀಯ ಮುಖಂಡರಿಂದ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಸಭೆಗಳನ್ನು ನಡೆಸಿ ರಾಜಣ್ಣನವರ ವಿರುದ್ಧ ಮಾತನಾಡುತ್ತಿದ್ದಾರೆ. ಈ.ಪಂ ಸದಸ್ಯ ನಾರಾಯಣ ಮೂರ್ತಿ, ರೆಡ್ಡಿ ಚಿನ್ನಾಲಪ್ಪ ಮುಂತಾದವರನ್ನು ರಾಜಕೀಯದಲ್ಲಿ ಚುನಾಯಿಸಲು ಕಾರಣ ರಾಜಣ್ಣನವರು. ಆದರೆ ಅವರೇ ಇಂದು ವೀರಾವೇಶದಿಂದ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಡಿಸಿಎಂ ಓಲೈಸುವ ಕೆಲಸ ಮಾಡಲಾಗುತ್ತಿದೆ. ನಾರಾಯಣಮೂರ್ತಿ ಈ ಮುಂಚೆ ಹಣ ವಸೂಲಿ ಮಾಡುತ್ತಿದ್ದ. ಆತನ ಬಡ್ಡಿ ದಂಧೆಯಿಂದ ಓರ್ವ ಸಾವನ್ನಪ್ಪಿದ್ದು, ನಾಲ್ಕು ತಿಂಗಳು ಕಾಲ ಊರು ಬಿಟ್ಟು ಪರಾರಿಯಾಗಿದ್ದ. ಅಂತವ ವ್ಯಕ್ತಿ ಇಂದು ರಾಜಣ್ಣ ವಿರುದ್ಧ ಮಾತನಾಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಎಚ್‍ಡಿಡಿ ಸೋಲಿಗೆ ಕೆ.ಎನ್.ರಾಜಣ್ಣ ಕಾರಣ ಎಂದು ಹೈಕಮಾಂಡ್‍ಗೆ ಪತ್ರ ಬರೆದ ರಾಮಕೃಷ್ಣ ಮುಖಂಡರನ್ನು ಓಲೈಸಲು ತಾನೇ ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ ಎಂಬ ಪೋಸ್ಟರ್‍ಗಳನ್ನು ಹಾಕಿಸಿದ್ದಾನೆ. ಅದರಲ್ಲಿ ಆತನ ಕೈವಾಡ ಇದೆ ಎಂದು ಆರೋಪಿಸಿದರಲ್ಲದೆ, ತುಮಕೂರಲ್ಲಿ ಮೈತ್ರಿ ಅಭ್ಯರ್ಥಿ ಸೋಲು ಕಾಣಲು ರಾಜಣ್ಣ ಕಾರಣವಾದರೆ, ಚಿಕಬಳ್ಳಾಪುರದಲ್ಲಿ ವೀರಪ್ಪಮೊಯ್ಲಿ ಸೋಲಿಗೆ ಕಾರಣರಾರು? ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸೋಲಲು ಕಾರಣರಾರು? ಅಲ್ಲಿ ಮೈತ್ರಿ ಇರಲಿಲ್ಲವಾ. ಎಂದು ಪ್ರಶ್ನಿಸಿದರು. ಇಲ್ಲಿ ದೇವೇಗೌಡರು ರಾಜಣ್ಣ ಅವರ ಮನೆಗೆ ಬಂದು ಏನಾದ್ರೂ ಚರ್ಚೆ ಮಾಡಿದ್ರಾ ಅಥವಾ ಮತ ಹಾಕಿಸುವಂತೆ ಕೇಳಿ ಕೊಂಡಿದ್ರಾ. ಇದ್ಯಾವುದು ಇಲ್ಲ. ಹಾಗಾಗಿ ರಾಜಣ್ಣ ಅವರು ತಟಸ್ಥರಾಗಿದ್ದುದಕ್ಕೆ ಕಾರ್ಯಕರ್ತರು, ಬೆಂಬಲಿಗರು ತಮ್ಮ ಇಚ್ಛೆಗೆ ಬಂದವರಿಗೆ ಮತ ಹಾಕಿದ್ದಾರೆ ಎಂದು ತಿಳಿಸಿದರು.
ಹಣ ಪೀಕುವ ರಾಮಕೃಷ್ಣ ನಗರದ 22ನೇ ವಾರ್ಡ್‍ಗೆ ಅಭ್ಯರ್ಥಿಯನ್ನು ಹಾಕುವಲ್ಲಿ ಹಣ ಪಡೆದಿದ್ದಾರೆ. ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ರಾಮಕೃಷ್ಣನಿಂದಲೇ ಕಾಂಗ್ರೆಸ್‍ಗೆ ನಾಲ್ಕನೇ ಸ್ಥಾನ ಬಂದಿದೆ ಎಂದು ಆರೋಪಿಸಿದರಲ್ಲದೆ, 2013ರಲ್ಲಿ ಪರಮೇಶ್ವರ್ ಅವರು ಸೋಲಲು ಈಗಿನ ನಾರಾಯಣಮೂರ್ತಿ, ಚಿನ್ನಾಲಪ್ಪ, ರಾಮಕೃಷ್ಣ, ಕೆಂಚಮಾರಯ್ಯ ಇವರ ತಂಡವೇ ಕಾರಣ
ಇವರ ಗೇಮ್ ಪ್ಲಾನ್ ನಿಂದ ಪರಮೇಶ್ವರ್ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಇವರಿಗೆ ಅಧಿಕಾರ ಬೇಕಾದಾಗ ರಾಜಣ್ಣ ಅವರು ಬೇಕು. ಅಧಿಕಾರ ಸಿಕ್ಕಮೇಲೆ ರಾಜಣ್ಣ ವಿರುದ್ಧವೇ ಮಾತನಾಡುತ್ತಾರೆ. ರಾಮಕೃಷ್ಣ ಬಗ್ಗೆ ಈಗಾಗಲೇ ದಿನೇಶ್‍ಗುಂಡೂರಾವ್ ಹಾಗೂ ಕೆ.ಸಿ.ವೇಣುಗೋಪಾಲ್ ಅವರಿಗೆ ದೂರು ಸಲ್ಲಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರನ್ನು ಬದಲಿಸಬೇಕು. ಕೆಟ್ಟ ಶಕ್ತಿಗಳನ್ನು ಹೊರಹಾಕಿ ನಾವು ಕಾಂಗ್ರೆಸ್‍ನಲ್ಲಿಯೇ ಉಳಿಯುತ್ತೇವೆ. ನಾವು ಮೂಲ ಕಾಂಗ್ರೆಸ್ಸಿಗರು ಎಂದು ತಿಳಿಸಿದರು.
ಮಾತಿನ ಮೇಲೆ ಹಿಡಿತವಿರಲಿ:
ರಾಜಣ್ಣ ಅವರ ಬಗ್ಗೆ ಮಾತನಾಡುವ ಮುಂಚೆ ಮಾತಿನ ಮೇಲೆ ಹಿಡಿತವಿರಲಿ. ಅವರ ಸಹಾಯ ಪಡೆದು ಈಗ ಅವರ ವಿರುದ್ಧವೇ ಮಾತನಾಡುವುದು ಸರಿಯಲ್ಲ. ಇದಕ್ಕೆ ಕೆ.ಎನ್,ಆರ್. ಅಭಿಮಾನಿಗ ಬಳಗದಿಂದ ಪ್ರತಿಭಟನೆ ಮಾಡಲಾಗುತ್ತದೆ. ಇದೆಲ್ಲದಕ್ಕೂ ಕಾರಣರಾದ ರಾಮಕೃಷ್ಣ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ನಾಳೆ ಬೆಳಗ್ಗೆಯಿಂದಲೇ ಕಾಂಗ್ರೆಸ್ ಪಕ್ಷದ ಎಲ್ಲಾ ಭಿನ್ನಾಭಿಪ್ರಾಯಗಳು ಸರಿಹೋಗುತ್ತವೆ. ಡಿಸಿಎಂ ಪರಮೇಶ್ವರ್ ಅವರ ಮುನಿಸು ಮಾಯವಾಗುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ