ತುಮಕೂರು :
ಡಾllಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಬೆನ್ನಲ್ಲೇ ಪರಾರಿಯಾಗಿದ್ದ ಅವರ ಪಿಎ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಬೆಳಗ್ಗೆ ಐಟಿ ದಾಳಿಗೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ಪಿಎ ರಮೇಶ್ ಅವರು ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಇದೀಗ ಜ್ಞಾನಭಾರತಿ ಯುನಿವರ್ಸಿಟಿ ಕ್ಯಾಂಪಸ್ ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ತಮ್ಮ ಇಬ್ಬರು ಆಪ್ತರಿಗೆ ಕರೆ ಮಾಡಿದ್ದ ರಮೇಶ್ ನಾನು ಬಡವ, ನನ್ನ ಮನೆ ಮೇಲೆ ಐಟಿ ದಾಳಿ ನಡೆದಿದೆ, ಇಷ್ಟು ದಿನ ನಿಯತ್ತಿನಿಂದ ಬದುಕಿದ್ದೇನೆ, ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಲು ಆಗುತ್ತಿಲ್ಲ, ಸಿಕ್ಕಾಪಟ್ಟೆ ಪ್ರಶ್ನೆ ಮಾಡುತ್ತಾರೆ, ನನ್ನಿಂದ ಇರಲು ಆಗುವುದಿಲ್ಲ ಎಂದು ಹೇಳಿ ನಿನ್ನೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ರಮೇಶ್ ಅವರು ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ರಮೇಶ್ ಮೂಲತಃ ಕುಣಿಗಲ್ ತಾಲೂಕಿನ ಮೇಳೆ ಹಳ್ಳಿ ನಿವಾಸಿಯಾಗಿದ್ದರು.
ಇನ್ನು ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.