ತುಮಕೂರು : ವಿದ್ಯಾವಂತರನ್ನು ಗ್ರಾಪಂ ಚುನಾವಣೆಗಳಲ್ಲಿ ಗೆಲ್ಲಿಸಲು ಸಹಮತ

 ಪ್ರಜಾಪ್ರಗತಿ-ಪ್ರಗತಿ ವಾಹಿನಿಯಿಂದ ಪಂಚಾಯಿತಿ ಫೈಟ್ ಚರ್ಚೆಯಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಾಯಕರು ಭಾಗಿ

ತುಮಕೂರು:

      ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಅಧಿಸೂಚನೆ ಸೋಮವಾರ ಹೊರಬಿದ್ದಿದೆ. ಪಕ್ಷ ರಹಿತ ಚುನಾವಣೆ ಇದಾದರೂ ಪಕ್ಷಗಳ ಛಾಯೆಯಿಂದ ಗ್ರಾಮಪಂಚಾಯಿತಿ ಅಖಾಡ ಹೊರತಾಗಿಲ್ಲ. ವಿವಿಧ ರಾಜಕೀಯ ಪಕ್ಷಗಳ ಬೆಂಬಲಿತರೇ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿರುವುದು ವಾಸ್ತವವಾಗಿದೆ. ಹಾಗಾಗಿ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗ್ರಾಮ ಪಂಚಾಯಿತಿ ಚುನಾವಣೆಗೆ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಮಾಡಿರುವ ತಯಾರಿ ಏನು? ಯಾವ ಅಜೆಂಡಾ ಮುಂದಿಟ್ಟುಕೊಂಡು ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಹೊರಟಿದ್ದಾರೆ. ಇದೆಲ್ಲದರ ಬಗ್ಗೆ ಪ್ರಜಾಪ್ರಗತಿ -ಪ್ರಗತಿ ವಾಹಿನಿಯಿಂದ ನಡೆದ ‘ಪಂಚಾಯಿತಿ ಫೈಟ್’ ವಿಶೇಷ ಚರ್ಚೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಬಿ.ಸುರೇಶ್‍ಗೌಡ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರುಳೀಧರ ಹಾಲಪ್ಪ ಹಾಗೂ ಜೆಡಿಎಸ್ ನಗರ ಅಧ್ಯಕ್ಷ ಬೆಳ್ಳಿ ಲೋಕೇಶ್ ಪಾಲ್ಗೊಂಡು ಪಂಚಾಯಿತಿಗಳ ಕಲ್ಯಾಣಕ್ಕೆ ತಮ್ಮ ಪಕ್ಷಗಳ ಕೊಡುಗೆಗಳೇನು? ಸರಕಾರಗಳ ವೈಫಲ್ಯಗಳೇನು ಎಂಬುದನ್ನು ಹಂಚಿಕೊಳ್ಳುವ ಜೊತೆಗೆ ವಿದ್ಯಾವಂತರನ್ನು ಗ್ರಾಮ ಪಂಚಾಯಿತಿಯಲ್ಲಿ ಗೆಲ್ಲಿಸುವ ಅವಶ್ಯಕತೆ ಬಗ್ಗೆ ಮೂರು ಪಕ್ಷಗಳ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ. ಚರ್ಚೆಯಲ್ಲಿ ಏನೆಲ್ಲ ವಿಷಯಗಳು ಪ್ರಸ್ತಾಪವಾದವು ತಿಳಿಯೋಣ ಬನ್ನಿ.

ರಾಷ್ಟ್ರೀಯತೆಯೊಂದಿಗೆ ಪಂಚಸೂತ್ರಗಳು ಬಿಜೆಪಿ ಗೆಲುವಿಗೆ ಪೂರಕ: ಸುರೇಶ್‍ಗೌಡ

      ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಹಿತಾಸಕ್ತಿ ವಿಷಯಗಳೊಂದಿಗೆ ಗ್ರಾಮಾಭಿವೃದ್ಧಿಯ ಪಂಚಸೂತ್ರಗಳನ್ನು ಮುಂದಿಟ್ಟು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರನ್ನು ಗೆಲ್ಲಿಸು ಕಾರ್ಯತಂತ್ರ ರೂಪಿಸಿದ್ದು, ವಿಧಾನಪರಿಷತ್, ವಿಧಾನಸಭೆ ಉಪಚುನಾವಣೆಯಲ್ಲಿ ಆದ ಗೆಲುವಿನ ಸರಣಿ ಪಂಚಾಯಿತಿ ಚುನಾವಣೆಯಲ್ಲಿ ಮುಂದುವರಿಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಬಿ.ಸುರೇಶ್‍ಗೌಡ ವಿಶ್ವಾಸ ವ್ಯಕ್ತಪಡಿಸಿದರು.

      ಗ್ರಾಮಸ್ವರಾಜ್ ಸಮಾವೇಶಗಳ ಮೂಲಕ ಬಿಜೆಪಿ ಪಂಚಾಯಿತಿ ಚುನಾವಣೆ ಎದುರಿಸಲು ಸಕಲಸಿದ್ಧತೆ ಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರಮೋದಿ, ಸಿಎಂ ಬಿಎಸ್‍ವೈ ಅವರ ನಾಯಕತ್ವ, ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಬೆಂಬಲಿತರ ಗೆಲುವಿಗೆ ಪೂರಕವಾಗಲಿದೆ. ಜಿಲ್ಲಾವಾರು ಸಮಾವೇಶಗಳನ್ನು ನಡೆಸಿ, ಪಂಚಾಯಿತಿಗಳ ಅಭಿವೃದ್ಧಿಗೆ ಯುವಜನರು, ವಿದ್ಯಾವಂತರು, ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ಯೋಜನೆ ರೂಪಿಸಿದ್ದು, 15ನೇ ಹಣಕಾಸು ಯೋಜನೆಯಡಿ ಗ್ರಾಮಪಂಚಾಯಿತಿಗಳ ಅಭಿವೃದ್ಧಿಗೆ 1 ಕೋಟಿ ಅನುದಾನ ದೊರೆತಿದೆ. ಸ್ವಚ್ಛತೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನಮ್ಮ ಸರಕಾರ ಕೊಟ್ಟಿದ್ದು, ವಸತಿ ಯೋಜನೆಯಲ್ಲಿ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲೇ ಕ್ರಾಂತಿಯೇ ಆಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ 25 ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಹತ್ತು ಪಂಚಾಯಿತಿಗಳು ಮಾದರಿ ಪಂಚಾಯಿತಿಗಳೆಂದು ಪುರಸ್ಕಾರ ಪಡೆದಿವೆ. ಜಾತಿ, ಹಣ ತೋಳ್ಬಲ ಹೊರತುಪಡಿಸಿ ಅಭಿವೃದ್ಧಿ ಆಧರಿಸಿ ಗೆಲುವು ಸಾಧಿಸುವುದೇ ಬಿಜೆಪಿ ಗುರಿಯಾಗಿದೆ ಎಂದರು.

      ಪ್ರತಿಭಟನೆಯಿಂದ ಪರಿಣಾಮವಿಲ್ಲ:

      60 ವರ್ಷ ದೇಶವನ್ನಾಳಿದ ಕಾಂಗ್ರೆಸ್‍ಗೆ ಎರಡು ಅವಧಿಯ ಬಿಜೆಪಿ ಆಡಳಿತವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದ ಸುರೇಶ್‍ಗೌಡ ಅವರು ಇನ್ನೂ ಜಾತ್ಯಾತೀತ ಜನತಾದಳದಲ್ಲಿ ಹೆಸರಿಗೆ ವಿರುದ್ಧವಾದ ಕಾರ್ಯವೇ ಹೆಚ್ಚು ನಡೆಯುತ್ತಿದೆ. ರೈತರ ಹೆಸರೇಳಿದರಷ್ಟೇ ಸಾಲದು. ಅವರ ಪರವಾಗಿ ನಿಜವಾದ ಕಾಳಜಿ ಪ್ರದರ್ಶಿಸಬೇಕು. ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಸಲುವಾಗಿ ಹಲವು ಸುತ್ತಿನ ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ರೈತರಲ್ಲಿನ ಗೊಂದಲ ನಿವಾರಣೆಯಾಗಲಿದೆ. ಪ್ರತಿಭಟನೆ ಪಂಚಾಯಿತಿ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.. ಇನ್ನೂ ಗ್ರಾಮಪಂಚಾಯಿತಿಗಳಲ್ಲಿ ಶಾಸಕರುಗಳ ಹಸ್ತಕ್ಷೇಪ ಸಲ್ಲದು. ಅದಕ್ಕೆ ಕಾನೂನಿನಲ್ಲಿಯೂ ಅವಕಾಶ ಇಲ್ಲ. ಪತ್ನಿಯರ ಆಡಳಿತದಲ್ಲಿ ಪತಿಯರ ದರ್ಬಾರ್ ಇದೆಲ್ಲ ಕೊನೆಗಾಣಬೇಕಾದರೆ ವಿದ್ಯಾವಂತರು ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಚುನಾಯಿತರಾಗಬೇಕು. ಹಾಗಾಗಿ ನನ್ನ ಗ್ರಾಮಾಂತರ ಕ್ಷೇತ್ರದಲ್ಲಿ ಕನಿಷ್ಠ ಪಿಯುಸಿ ವಿದ್ಯಾರ್ಹತೆಯನ್ನಾಧರಿಸಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದರು.

ರೈತ ವಿರೋಧಿ ಕಾನೂನುಗಳು ಬಿಜೆಪಿಗೆ ತಿರುಗುಬಾಣವಾಗಲಿದೆ: ಮುರಳೀಧರ ಹಾಲಪ್ಪ

      ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳು ರೈತ ವಿರೋಧಿಯಾಗಿದ್ದು, ಇಡೀ ಭಾರತದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಸರಕಾರದ ವಿರುದ್ಧ ಹೋರಾಟದ ಕಹಳೆ ಮೊಳಗುತ್ತಿದೆ. ಡಿ.8ರ ಭಾರತ್ ಬಂದ್ ರೈತ, ಜನಸಾಮಾನ್ಯರ ವಿರೋಧಿಯಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ರೈತ ವಿರೋಧಿ ಕಾನೂನುಗಳು ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ ತಿಳಿಸಿದರು.
ಇಂದು ಹಳ್ಳಿಹಳ್ಳಿಗೆ ಹೋದಾಗಲು ವಿದ್ಯಾವಂತ ನಿರುದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಕೃಷಿಯನ್ನೇ ನಂಬಿದ ರೈತರು, ಕೈಗಾರಿಕಾ ಕಾರ್ಮಿಕರು, ಮಕ್ಕಳು, ಮಹಿಳೆಯರು ಹೀಗೆ ಹಲವು ವರ್ಗದ ಜನಸಾಮಾನ್ಯರು ತತ್ತರಿಸಿಹೋಗುತ್ತಿದ್ದಾರೆ. ಬಿಸಿಯೂಟ, ಮಾತೃಪೂರ್ಣ, ಮಾತೃವಂದನಾ ಇವೆಲ್ಲ ಜನಪರ ಕಾರ್ಯಕ್ರಮಗಳಿಗೂ ಬಿಜೆಪಿ ಸರಕಾರ ಕೊಕ್ಕೆಯಾಗಿದ್ದು, ಬರೀ ಕೋಮು ಭಾವನೆ, ಸುಳ್ಳು ಭಾಷಣಗಳ ಮೂಲಕ ಜನರನ್ನು ವಂಚಿಸಲು ಹೊರಟಿದ್ದಾರೆ. ಇದರ ವಿರುದ್ಧ ಜನಸಾಮಾನ್ಯರು ತಿರುಗಿಬಿದ್ದಿದ್ದು, ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಸಮಾಜವಾದಿ ಪಾರ್ಟಿಯ ಅಭ್ಯರ್ಥಿ ಗೆಲುವು, ಆರ್‍ಎಸ್‍ಎಸ್ ಶಕ್ತಿ ಕೇಂದ್ರ ಮಹಾರಾಷ್ಟ್ರದ ನಾಗಪುರದಲ್ಲಿ ಮಹಾವಿಕಾಸಅಡಿ ಮೈತ್ರಿಕೂಟ ಗೆಲುವುಸಾಧಿಸಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಸೋಲುವುದು ನಿಶ್ಚಿತ ಎಂದು ನುಡಿದರು.

250 ಪಂಚಾಯಿತಿ ಗೆಲ್ಲುವ ವಿಶ್ವಾಸ:

      ಮಹಾತ್ಮಗಾಂಧಿಯವರ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಿದವರು ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿಯವರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಸ್ಥಿತ್ವಕ್ಕೆ ಪ್ರಜಾಪ್ರಭುತ್ವವನ್ನು ಗ್ರಾಮಹಂತದಲ್ಲೇ ಭದ್ರಗೊಳಿಸುವ ಕಾರ್ಯ ಮಾಡಿದ್ದಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಹಲವು ಕಾರ್ಯಕ್ರಮಗಳು ಗ್ರಾಮಾಭಿವೃದ್ಧಿಗೆ ಪೂರಕವಾಗಿದ್ದು, ನರೇಗಾದಲ್ಲಿ ದೊಡ್ಡ ಕ್ರಾಂತಿಯಾಗಿದೆ. ಬಿಜೆಪಿಗೆ ಕನಿಷ್ಠ ಗ್ರಾಮ ಪಂಚಾಯಿತಿಗಳಿಗೂ ಗಾಂಧಿ ಪುರಸ್ಕಾರ ಕೊಡಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಗೂ ಕಾಂಗ್ರೆಸ್ ಹಲವು ಸುತ್ತಿನ ಸಭೆ ನಡೆಸಿ, ಸಿದ್ಧತೆ ನಡೆಸಿದ್ದು, ಜಿಲ್ಲೆಯ 329 ಪಂಚಾಯಿತಿಗಳಲ್ಲಿ 250 ಪಂಚಾಯ್ತಿ, ರಾಜ್ಯ ಮಟ್ಟದಲ್ಲಿ 3000 ಪಂಚಾಯಿತಿಗಳನ್ನು ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಮೀಸಲು ದೇವೇಗೌಡರ ಬಳುವಳಿ : ಬೆಳ್ಳಿ ಲೋಕೇಶ್

      ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ನಗರ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದು, ಗ್ರಾಮಾಭಿವೃದ್ಧಿಯನ್ನು ಮರೆತಿವೆ. ಎಲ್ಲಾ ಜಾತಿ ವರ್ಗದವರಿಗೆ ಸಮಾನ ಅವಕಾಶ ಕಲ್ಪಿಸಬೇಕೆಂದು ಹೊರಟು ಗ್ರಾಮ ಪಂಚಾಯಿತಿಯಲ್ಲಿ ಮೀಸಲು ವ್ಯವಸ್ಥೆಯನ್ನು ಜಾರಿಗೆ ತಂದವರೇ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಂದು ಜೆಡಿಎಸ್ ನಗರ ಅಧ್ಯಕ್ಷ ಬೆಳ್ಳಿ ಲೋಕೇಶ್ ತಿಳಿಸಿದರು.

     ದೇವೇಗೌಡರು ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಮೀಸಲು ಜಾರಿಗೊಳಿಸದಿದ್ದರೆ ಅಲಕ್ಷಿತರು, ಜನಸಾಮಾನ್ಯರು ರೈತಾಪಿ ವರ್ಗದವರು ಆರಿಸಿ ಬರಲು ಸಾಧ್ಯವಾಗುತ್ತಲೇ ಇರಲಿಲ್ಲ. ಕಾಂಗ್ರೆಸ್-ಬಿಜೆಪಿಯಂತೆ ಜೆಡಿಎಸ್ ಅಬ್ಬರ ಪ್ರದರ್ಶಿಸದಿದ್ದರೂ ಜನಸಾಮಾನ್ಯ ರೈತಾಪಿ ವರ್ಗದ ಮನದಲ್ಲಿ ನೆಲೆನಿಂತಿದೆ. ಬಿಜೆಪಿ ಜಾತಿ ಧರ್ಮ ರಾಜಕಾರಣ ಮಾಡುತ್ತಾ ಜನಸಾಮಾನ್ಯ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾಂಗ್ರೆಸ್‍ನ ಸುದೀರ್ಘ ಆಡಳಿತದಲ್ಲೂ ಜನಸಾಮಾನ್ಯರ, ರೈತರ ಕಷ್ಟ ನಿವಾರಣೆಯಾಗಿಲ್ಲ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರ ಗೆಲುವಿಗೆ ಸಹಾಯಕವಾಗಲಿದೆ ಎಂದರು.

      ರಾಜಧಾನಿಯಲ್ಲಿ ಮೈನಸ್ ಡಿಗ್ರಿ ಚಳಿಯ ವಾತಾವರಣದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಇವರ ಬಗ್ಗೆ ಪ್ರಧಾನಿ ತುಟಿ ಬಿಚ್ಚುತ್ತಿಲ್ಲ. ಕೃಷಿ ಸಚಿವರು ಮಾತುಕತೆ ನಡೆಸುವುದನ್ನು ಬಿಟ್ಟು, ಗೃಹ ಸಚಿವರನ್ನು ಕಳುಹಿಸಲಾಗುತ್ತದೆ. ರೈತರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ. ರಾಜ್ಯಕ್ಕೆ ದೊರೆಯಬೇಕಾದ ಜಿಎಸ್‍ಟಿ ಪಾಲನ್ನು ಸರಿಯಾಗಿ ನೀಡುತ್ತಿಲ್ಲ. ಕೊರೊನಾ ನಿರ್ವಹಣೆ ವಿಷಯದಲ್ಲೂ ಸರಕಾರ ಎಡವಿದೆ. ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳು ಜನಸಾಮಾನ್ಯರ ಸಮಸ್ಯೆಗೆ ಹೆಚ್ಚು ಸ್ಪಂದಿಸಬಲ್ಲವು. ವಿದ್ಯಾವಂತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಜೊತೆಗೆ ಅವರಿಗೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿದರೆ ನಿಜವಾದ ಗ್ರಾಮಸ್ವರಾಜ್ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಚರ್ಚೆಯಲ್ಲಿ ಕೇಳಿಬಂದ ಪ್ರಮುಖಾಂಶಗಳು :

* ರೈತರ ಹೋರಾಟವನ್ನು ಬಿಜೆಪಿ ಉಪೇಕ್ಷಿಸುತ್ತಿದೆ.
* 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಕೊಡುಗೆ ಏನು?
* ಜೆಡಿಎಸ್ ಹೆಸರಿಗಷ್ಟೇ ಜಾತ್ಯಾತೀತ. ಜಾತಿಯೇ ಅತೀತವಾಗಿದೆ.
* ವಿದ್ಯಾವಂತರು, ಯೋಗ್ಯರು ಆಯ್ಕೆಯಾಗಬೇಕಿದೆ.
* ಗ್ರಾಮ ಪಂಚಾಯಿತಿಗಳಲ್ಲಿ ಶಾಸಕರ ಹಸ್ತಕ್ಷೇಪ ಸಲ್ಲದು.
* ಮಹಿಳಾ ಸದಸ್ಯರ ಪತಿಯಂದಿರ ದರ್ಬಾರ್ ನಿಲ್ಲಬೇಕು.
* ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವವರನ್ನು ಚುನಾಯಿಸಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link
Powered by Social Snap