ತುಮಕೂರು :
ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿರುವ ಆಂತರಿಕ ಸಂಘರ್ಷದಿಂದಾಗಿ ಆ ಪಕ್ಷಗಳ ನಾಯಕರು ಕಾಂಗ್ರೆಸ್‍ನತ್ತ ಒಲವು ತೋರುತ್ತಿದ್ದು ಸದ್ಯದ ಸ್ಥಿತ್ಯಂತರದ ರಾಜಕಾರಣದ ಸಂದರ್ಭ ಕೈ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಿಂದಲೇ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಾ ಬಂದಿರುವ ವಿಧಾನಪರಿಷತ್ ಸದಸ್ಯ ಕಾಂತರಾಜು ಈಗಾಗಲೇ ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲಿದ್ದು, ಪಕ್ಷ ಸೇರಲು ಕೈ ನಾಯಕರ ಹಸಿರು ನಿಶಾನೆಗೆ ಎದುರು ನೋಡುತ್ತಿದ್ದರೆ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಜೆಡಿಎಸ್ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಸೋಮವಾರದ ಸಮಾವೇಶದಲ್ಲಿ ಶಾಸಕರು ಅವರಿಷ್ಠ ಬಂದ ಕಡೆ ಹೋಗಲು ಅನುಮತಿಯಿದೆ. ಶುಭವಾಗಲಿ ಎಂದು ಹೇಳಿರುವುದು ಶ್ರೀನಿವಾಸ್ ಅವರ ಕಾಂಗ್ರೆಸ್ ಸೇರುವ ಹಾದಿಯನ್ನು ಸುಗುಮಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಸ್ತದೆಡೆಗೆ ಶ್ರೀನಿವಾಸ್ ನಡೆಯೇ?:
ಎಚ್ಡಿಕೆ ಹೇಳಿಕೆಯನ್ನೇ ಆಧರಿಸಿ ಶ್ರೀನಿವಾಸ್ ಅವರು ಕಾರ್ಯಕರ್ತರೊಡನೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದು, ಇನ್ನೂ ಒಂದೂವರೆ ವರ್ಷ ಶಾಸಕತ್ವದ ಅವಧಿ ಇರುವುದರಿಂದ, ಮತ್ತೊಂದು ಪಕ್ಷಕ್ಕೆ ಸೇರಬೇಕಾದರೆ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಸನಿಹದವರೆಗೂ ಕಾದು ನೋಡುವ ತಂತ್ರಕ್ಕೆ ಶರಣಾಗಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಹಾಗೂ ಶ್ರೀನಿವಾಸ್ ಅವರ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ.
ಗ್ರಾಮಾಂತರ ಹಾಲಿ-ಮಾಜಿ ಶಾಸಕರು ಕೈ ನತ್ತ ?:
ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಅವರ ಇಬ್ಬರು ಸಹೋದರರು ಕಾಂಗ್ರೆಸ್ ಸೇರುವುದಾಗಿ ಘೋಷಿಸಿ, ಕೊರಟಗೆರೆಯಲ್ಲಿ ಪರಮೇಶ್ವರ ಅವರ ಗೆಲುವಿಗೆ ಶ್ರಮಿಸುವುದಾಗಿ ಬಹಿರಂಗ ಹೇಳಿಕೆ ನೀಡಿರುವುದು ಡಿ.ಸಿ.ಗೌರಿಶಂಕರ್ ಸಹ ಮುಂದೆ ಕಾಂಗ್ರೆಸ್‍ನತ್ತ ವಾಲುವರೇ ಎಂಬ ಚರ್ಚೆ, ವದಂತಿಗಳಿಗೆ ಕಾರಣವಾಗಿದ್ದು, ಇವರ ಎದುರಾಳಿ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್‍ಗೌಡ ಸಹ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆಂಬ ಮಾತುಗಳು ಅವರು ಕಳೆದ ತಿಂಗಳು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಂದಿನಿಂದ ಕೇಳಿಬರುತ್ತಿದೆ.
ಕಾಂಗ್ರೆಸ್ ಸೇರಲು ರೆಡಿಯಾದ ಲೋಕೇಶ್ವರ್:
ತಿಪಟೂರಿನ ಬಿಜೆಪಿ ಮುಖಂಡ ಬಿಎಸ್‍ವೈ ಆಪ್ತ ಲೋಕೇಶ್ವರ್ ಅವರು ಸಚಿವ ಬಿ.ಸಿ.ನಾಗೇಶ್ ಅವರೊಂದಿಗಿನ ವೈಮನಸ್ಯದ ಕಾರಣಕ್ಕೆ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದು, ತುಮಕೂರು ನಗರ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಹ ತಮ್ಮ ತಂದೆ ಸಂಸದ ಜಿ.ಎಸ್.ಬಸವರಾಜು ಅವರ ಹಿಂದಿನ ಕಾಂಗ್ರೆಸ್ ನಂಟು, ಬಿಜೆಪಿ ಪಕ್ಷದ ಆಂತರಿಕ ಬೇಗುದಿಗಳ ಕಾರಣಕ್ಕೆ ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆಯ ಕೈ ಪಾಳಯ ಸೇರುತ್ತಾರೆಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಚಿ.ನಾ.ಹಳ್ಳಿ ಜೆಡಿಎಸ್ ಮಾಜಿ ಶಾಸಕ ಸಿ ಬಿ.ಸುರೇಶ್‍ಬಾಬು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಿಂದಿನಿಂದಲೂ ಆಪ್ತರು. ಆದರೆ ಇತ್ತೀಚೆಗೆ ಸಂಬಂಧ ಹಳಸಿ ಕಾಂಗ್ರೆಸ್‍ನತ್ತ ಅವರು ಮುಖಮಾಡುವರು ಎಂಬ ವದಂತಿಗಳು ಕೇಳಿಬಂದಿದ್ದವು. ಆದರೆ ಎಚ್ಡಿಕೆ ಬಿಡದಿ ಕಾರ್ಯಗಾರಕ್ಕೂ ಮುನ್ನ ಸುರೇಶ್‍ಬಾಬುವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತಾಡಿಸಿದ್ದು, ಗುಬ್ಬಿ ಜೆಡಿಎಸ್ ಸಮಾವೇಶದ ವೇದಿಕೆಯಲ್ಲೂ ಕಾಣಿಸಿಕೊಂಡರು. ಆದರೂ ಸುರೇಶ್‍ಬಾಬು ಅವರು ಜೆಡಿಎಸ್‍ನಲ್ಲೇ ವಿಶ್ವಾಸಪೂರ್ವಕವಾಗಿ ಮುಂದುವರಿಯುವರೇ ಎಂಬುದರ ಬಗ್ಗೆ ಅನುಮಾನಗಳಿವೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲೇ ಕೇಳಿಬರುತ್ತಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸೇರುವವರ ಪಟ್ಟಿ ಹೆಚ್ಚುತಲ್ಲಿದ್ದು, ಹೊಸಬರ ಪ್ರವೇಶದೊಂದಿಗೆ ಮೂಲ ಕಾಂಗ್ರೆಸ್ಸಿಗರ ಅಸ್ಥಿತ್ವದ ಪ್ರಶ್ನೆಯೂ ಏಳಲಾರಂಭಿಸಿದೆ. ಜೆಡಿಎಸ್-ಬಿಜೆಪಿ ನಾಯಕರನ್ನು ಕಾಂಗ್ರೆಸ್‍ಗೆ ಸೇರ್ಪಡೆಮಾಡಿಸಿಕೊಳ್ಳುವುದರೊಂದಿಗೆ ಒಳಗಿನ ಬೇಗುದಿಯನ್ನು ತಣಿಸುವ ಹೊಣೆಗಾರಿಕೆ ಕಾಂಗ್ರೆಸ್ ನಾಯಕರ ಹೆಗಲೇರಿದೆ. ಇದನ್ನು ಕೈ ನಾಯಕರು ಯಾವ ರೀತಿ ನಿಭಾಯಿಸುವರು ಎಂಬುದರ ಮೇಲೇ ಕಾಂಗ್ರೆಸ್‍ಗೆ ಲಾಭ-ನಷ್ಟ ನಿರ್ಧರಿತವಾಗಲಿದೆ.
ಕೈ ನಾಯಕರ ಸಂಪರ್ಕದಲ್ಲಿ ಅಸಮಾಧಾನಿತರು!
ಬಿಜೆಪಿ-ಜೆಡಿಎಸ್‍ನಲ್ಲಿ ಅಸಮಾಧಾನಿತರಾಗಿರುವ ಜಿಲ್ಲೆಯ ಹಾಲಿ-ಮಾಜಿ ಶಾಸಕರುಗಳು ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಆಂತರ್ಯದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಟಿ.ಬಿ.ಜಯಚಂದ್ರ ಅವರ ಸಂಪರ್ಕದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಇದನ್ನು ಖುದ್ದಾಗಿ ಕಾಂಗ್ರೆಸ್‍ನ ಕುಣಿಗಲ್ ಶಾಸಕ ಡಾ.ರಂಗನಾಥ್ ಪುಷ್ಟೀಕರಿಸುತ್ತಿದ್ದು, ಕುಮಾರಸ್ವಾಮಿ ಅವರೇ ಹೇಳಿರುವಂತೆ ಡಿ.ಕೆ.ಶಿವಕುಮಾರ್ ನಾಯಕರನ್ನು ಸೆಳೆಯುತ್ತಿಲ್ಲ. ಕಾಂಗ್ರೆಸ್ ಸಿದ್ಧಾಂತ, ಡಿಕೆಶಿ ನಾಯಕತ್ವ ಮೆಚ್ಚಿ ಅವರೇ ಬರಲು ಸಿದ್ಧರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಿಗೂಢವಾದ ಎಸ್ಪಿಎಂ ನಡೆ?
ಮತ್ತೊಂದೆಡೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಿತರಾಗಿ ಕಾಂಗ್ರೆಸ್ ಹಾಗೂ ರಾಜಕೀಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಮತ್ತೆ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಒಲವುತೋರಿದ್ದಾರೆಂಬ ಚರ್ಚೆಗಳು ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಕುಣಿಗಲ್‍ನ ಮಾರ್ಕೋನಹಳ್ಳಿ ಡ್ಯಾಂ ವೀಕ್ಷಣೆಯ ಚಿತ್ರಗಳಿಂದ ಹೆಚ್ಚಾಗಿದ್ದು, ಬಿಜೆಪಿಯತ್ತ ಮುಖ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಮುದ್ದಹನುಮೇಗೌಡರು ಮಾತ್ರ ಈ ವಿಷಯದಲ್ಲಿ ಯಾವುದೇ ಗುಟ್ಟುಬಿಟ್ಟುಕೊಡಲು ತಯಾರಿಲ್ಲ. ಮತ್ತೆ ಲೋಕಸಭೆಗೆ ನಿಲ್ಲಬೇಕೋ?, ಶಾಸನಸಭೆಗೆ ಹೋಗಬೇಕೋ? ಎಂಬ ಬಗ್ಗೆ ಗೊಂದಲದಲ್ಲಿದ್ದೇನೆ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್‍ಗೆ ಜಿಲ್ಲೆಯಲ್ಲಿ ಪಾಸಿಟಿವ್ ಅಂಶಗಳು ಹೆಚ್ಚಾಗುತ್ತಿದೆ. ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬಿಜೆಪಿ ಹಾಲಿ-ಮಾಜಿ ಶಾಸಕರು ನಮ್ಮ ರಾಜ್ಯ ನಾಯಕರುಗಳ ಸಂಪರ್ಕದಲ್ಲಿದ್ದು, ನನ್ನ ಜೊತೆಗೂ ಚರ್ಚಿಸಿದ್ದಾರೆ. ತೈಲ ಬೆಲೆ ಸೇರಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಹಾಗೂ ಬಿಜೆಪಿ-ಜೆಡಿಎಸ್‍ನಲ್ಲಿ ಅವರುಗಳನ್ನು ನಡೆಸುಕೊಳ್ಳುತ್ತಿರುವ ರೀತಿ ಅವರನ್ನು ಕಾಂಗ್ರೆಸ್‍ನತ್ತ ಒಲವು ಮೂಡುವಂತೆ ಮಾಡಿದೆ.
-ಡಾ.ರಂಗನಾಥ್, ಕುಣಿಗಲ್ ಕಾಂಗ್ರೆಸ್ ಶಾಸಕ.
ಕುಮಾರಸ್ವಾಮಿ ಅವರು ಚಾಡಿ ಮಾತುಗಳನ್ನು ಕೇಳಿ ನಾಯಕರಗಳನ್ನು ಪಕ್ಷದಿಂದ ದೂರ ಮಾಡುತ್ತಿದ್ದಾರೆ. ಶ್ರೀನಿವಾಸ್ ಅವರದ್ದು ಗೊತ್ತಿಲ್ಲ. ನಾನಂತೂ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದೇನೆ. ಹಸ್ತ ಪಕ್ಷ ಸೇರಲು ನಾಯಕರ ಹಸಿರು ನಿಶಾನೆಗೆ ಎದುರು ನೋಡುತ್ತಿರುವೆ.
-ಕಾಂತರಾಜು, ವಿಧಾನಪರಿಷತ್ ಜೆಡಿಎಸ್ ಸದಸ್ಯ.