ಭಜರಂಗದಳ ಸಂಚಾಲಕನ ಹಲ್ಲೆ ; ತುಮಕೂರು ಭಾಗಶಃ ಬಂದ್!!

 ತುಮಕೂರು :

    ಭಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ, ಕಿರಣ್ ಮೇಲಿನ ಹಲ್ಲೆ ಘಟನೆ ಖಂಡಿಸಿ, ಗೋ ವಧೆಯನ್ನು ತಡೆಯಬೇಕು ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಶುಕ್ರವಾರ ಕರೆ ಕೊಟ್ಟಿದ್ದ ತುಮಕೂರು ನಗರ ಬಂದ್ ಭಾಗಶಃ ಯಶಸ್ವಿಯಾಗಿದೆ.

     ಬಂದ್ ಅಂಗವಾಗಿ ನಗರದ ಪ್ರಮುಖ ರಸ್ತೆ, ವಾಣಿಜ್ಯ ರಸ್ತೆ ಗಳಲ್ಲಿ ಅಂಗಡಿ ಮುಂಗಟ್ಟುಗಳು, ಹೋಟೆಲ್ ರೆಸ್ಟೊರೆಂಟ್‍ಗಳು ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದವು. ಹಿಂದೂ ಪರಸಂಘಟನೆಗಳ  ಕಾರ್ಯಕರ್ತರು, ಮುಖಂಡರು ಬೈಕ್ ರ್ಯಾಲಿ, ಪ್ರತಿಭಟನಾ ಸಭೆ ಮೂಲಕ ಆಕ್ರೋಶ ಹೊರಹಾಕಿದರು. ಉಳಿದಂತೆ ಸರಕಾರಿ ಕಚೇರಿ, ಬ್ಯಾಂಕ್ ಗಳು, ಕಾಲೇಜು, ಆಸ್ಪತ್ರೆ ಔಷಧಿಗಂಡಿಗಳು ಬಂದ್‍ನಿಂದ ಹೊರತಾಗಿದ್ದವು. ರಸ್ತೆಯಲ್ಲಿ ವಾಹನ ಬಸ್ ಸಂಚಾರ ಎಂದಿನಂತಿತ್ತು. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು  ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಗರದ ನಾಲ್ಕು ದಿಕ್ಕು, ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಿದ್ದರು. ಎಸ್ಪಿ ರಾಹುಲ್‍ಕುಮಾರ್ ಶಹಾಪುರವಾಡ್ ಎಎಸ್ಪಿ ಉದೇಶ್‍ಕುಮಾರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ಸ್ಥಳದಲ್ಲೇ ಮೊಕ್ಕಾಂಹೂಡಿ ಪರಿಸ್ಥಿತಿ ನಿಯಂತ್ರಿಸಿದರು.

ಜಿಹಾದಿಗಳ ಕೈವಾಡ ತನಿಖೆಯಾಗಲಿ:

     ಪಾಲಿಕೆ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಭಜರಂಗದಳದ ದಕ್ಷಿಣ ಪ್ರಾಂತ್ಯ ಸಂಚಾಲಕ ಉಲ್ಲಾಸ್ ಕಾರಂತ್ ಹಲ್ಲೆ ಘಟನೆ ಹಿಂದೆ ಮತೀಯವಾದಿ ಜಿಹಾದಿ ಗಳ ಕೈವಾಡವಿದ್ದು ಪೊಲೀಸರು ಆ ದಿಸೆಯಲ್ಲಿ ತನಿಖೆ ನಡೆಸಿ ಪ್ರಕರಣದ ಹಿನ್ನೆಲೆಯನ್ನು ಪತ್ತೆ ಹಚ್ಚಬೇಕು. ಹಿಂದೂ ಧರ್ಮೀಯರ ಮೇಲಿನ ಆಕ್ರಮಣ ತಡೆಯಬೇಕು. ನಮ್ಮ ಸಹನೆಗೂ ಮಿತಿಯಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಆಗ್ರಹಿಸಿದರು.

     ವಿಶ್ವ ಹಿಂದೂ ಪರಿಷತ್ ವಿಭಾಗೀಯ ಉಸ್ತುವಾರಿ ಬಸವರಾಜು ಅವರು ಮಾತನಾಡಿ, ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿಸಬೇಕು ಹಾಗೂ ಮಂಜು ಭಾರ್ಗವ್‍ಗೆ ಕೊಲೆ ಬೆದರಿಕೆ ಹಾಕಿದ್ದ ಇಸ್ಮಾಯಿಲ್ ಅವರನ್ನು ಬಂಧಿಸುವಂತೆ ಆಗ್ರಹಿಸಿದ ಅವರು, ಹಿಂದೂಗಳನ್ನು ಮುಟ್ಟಿದರೆ ಎಲ್ಲರು ಒಗ್ಗಟ್ಟಾಗುತ್ತಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ. ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆಂದರು.

ತುಮಕೂರು ನಗರ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ವಾಣಿಜ್ಯ ರಸ್ತೆಗಳಲಿ ಮುಚ್ಚಲ್ಪಟ್ಟಿದ್ದ ಅಂಗಡಿ ಮುಂಗಟ್ಟುಗಳು.

     ಭಜರಂಗದಳ ಮುಖಂಡ ಸುನೀಲ್ ಮಾತನಾಡಿ ಹಿಂದೂ ಸಮಾಜ ಮೊದಲಿನಂತೆ ಶಾಂತಿಯ ಮಂತ್ರವನ್ನೇ ಪಠಿಸುತ್ತಾ ಕೂರುವುದಿಲ್ಲ. ಹಲ್ಲೆ ಘಟನೆಗಳು ಹೀಗೆ ಮುಂದುವರಿದರೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಜೆ 4ರ ಬಳಿಕ ಒಂದೊಂದೇ ಅಂಗಡಿ ಮುಂಗಟ್ಟುಗಳು, ನೈಟ್ ಕ್ಯಾಂಟೀನ್‍ಗಳು ತೆರೆಯಲಾರಂಭಿಸಿದವು. ಪ್ರತಿಭಟನಾ ಸಭೆ, ಧರಣಿಯಲ್ಲಿ ಹಿಂದೂ ಸಂಘಟನೆ ಪ್ರಮುಖರಾದ ಬಸವರಾಜ್, ಸುನೀಲ್ ವಿಹಿಂಪ ಜಿಲ್ಲಾ ಧ್ಯಕ್ಷ ಜಿ. ಕೆ. ಶ್ರೀ ನಿವಾಸ್ ಎಂಎಲ್ಸಿ ಚಿದಾನಂದ ಗೌಡ, ಮೇಯರ್ ಬಿ. ಜಿ. ಕೃಷ್ಣ ಪ್ಪ, ಟೂಡಾ ಅಧ್ಯಕ್ಷ ಬಾವಿ ಕಟ್ಟೆ ನಾಗಣ್ಣ, ಜಿಲ್ಲಾ ಪ್ರಧಾನಕಾರ್ಯದರ್ಶಿ, ಹೆಬ್ಬಾಕರವಿ, ವಿನಯ್‍ಬಿದರೆ, ಅಖಿಲಾನಂದ್, ಚಂದ್ರಶೇಖರ್ ಸೇರಿ ಬಿಜೆಪಿಯ ಪಾಲಿಕೆ, ಟೂಡಾ ಸದಸ್ಯರು ಸೇರಿ ಹಲವು ಮುಖಂಡರು ಕಾರ್ಯಕರ್ತರು ಪಾಲ್ಗೊಂಡರು.

    ಎಸ್ಪಿ ಜೊತೆ ವಾಕ್ಸಮರ, ಡಿಸಿಗೆ ಮನವಿ:

     ಪ್ರತಿಭಟನಾ ಸಭೆ ಬಳಿಕ ಅಶೋಕ ರಸ್ತೆ ಯಲ್ಲಿ ಭಗವಾಧ್ವಜ ಹಿಡಿದು ಪ್ರತಿಭಟನಾ ಮೆರವಣಿಗೆ ಗೆ ಮುಂದಾಗಿದ್ದ ಕಾರ್ಯಕರ್ತರನ್ನು ಅನುಮತಿಯಿಲ್ಲದ ಕಾರಣಕ್ಕೆ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಎಸ್ಪಿ ನಡುವೆ ಮಾತಿನ ಚಕಮಕಿ ನಡೆಯಿತು. ಕಡೆಗೆ ಶಾಸಕ ಜ್ಯೋತಿ ಗಣೇಶ್ ಮಧ್ಯ ಪ್ರವೇಶಿಸಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರಿಂದ ಎಸ್ಪಿ ಅನುಮತಿಸಿದರು. ಸ್ವಾತಂತ್ರ್ಯ ಚೌಕದ ವರೆಗೂ ಸಾಗಿಬಂದ ಪ್ರತಿಭಟನಕಾರರು ಅಲ್ಲೇ ಧರಣಿ ಕುಳಿತರು.ಡಿಸಿ ವೈ.ಎಸ್.ಪಾಟೀಲ್ ಸ್ಥಳಕ್ಕಾಗಮಿಸಿ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ, ಕಾನೂನು ಬಾಹಿರವಾಗಿ ತಲೆಎತ್ತಿರುವ ಕಸಾಯಿಖಾನೆಗಳನ್ನು ಮುಚ್ಚಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಕಾರರು ವಾಪಸ್ಸಾದರು.

      ಹಲ್ಲೆಘಟನೆ ಖಂಡಿಸಿ ನಗರದ ನಾಗರಿಕರು ಸ್ವಯಂಪ್ರೇರಿತವಾಗಿ ಬಂದ್‍ಗೆ ಸಹಕರಿಸಿದ್ದು, ಸಮಾಜದ ಯುವಕರು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಹಿಂದೂಪರ ಸಂಘಟನೆಗಳು ಮಾಡಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು.

-ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕರು.

     ನಗರದಲ್ಲಿ ನಡೆಯುತ್ತಿರುವ ಕಸಾಯಿಖಾನೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ರೀತ್ಯ ಕ್ರಮವಹಿಸಲಾಗುವುದು. ಗೋರಕ್ಷಣೆ ಮಾಡುವ ನಿಟ್ಟಿನಲ್ಲಿ ಸಿರಾದಲ್ಲಿ ಗೋಶಾಲೆ ತೆರೆಯಲು ಜಾಗ ಗುರುತಿಸಲಾಗಿದೆ ಹಾಗೆಯೇ ಗೋರಕ್ಷಕರು ಪ್ರಾರಂಭಿಸುವ ಗೋಶಾಲೆಗಳಿಗೆ ಸಹಕಾರ ನೀಡಲಾಗುವುದು.

-ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿ

  (ಫೋಟೋ: ಭಜರಂಗದಳದ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಧರಣಿ ನಡೆಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೇರಿ
(ಫೋಟೋ: ತುಮಕೂರು ನಗರ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ವಾಣಿಜ್ಯ ರಸ್ತೆಗಳಲಿ ಮುಚ್ಚಲ್ಪಟ್ಟಿದ್ದ ಅಂಗಡಿ ಮುಂಗಟ್ಟುಗಳು.
(ಫೋಟೋ: ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Recent Articles

spot_img

Related Stories

Share via
Copy link