ತುಮಕೂರು :

ಕಾಂಗ್ರೆಸ್ ನಾಯಕರನ್ನು ಗುರಿ ಮಾಡಿ ಅವರ ವಿರುದ್ಧ ಐಟಿ, ಇಡಿ ದಾಳಿ ಮಾಡಿಸುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿ ನಗರದ ಬಿಜಿಎಸ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಾಜಿ ಉಪ ಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ದುರುದ್ದೇಶದಿಂದ ಐಟಿ ದಾಳಿ ನಡೆಸಿ ಸಂಸ್ಥೆಗೆ ಕೆಟ್ಟ ಹೆಸರು ತರುವ ಜೊತೆಗೆ ಡಾ. ಪರಮೇಶ್ವರ್‍ರ ತೇಜೋವಧೆ ಮಾಡುವ ತಂತ್ರ ಮಾಡಲಾಗುತ್ತಿದೆ ಎಂದು ಮುಖಂಡರು ಆಪಾದಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬಿಜಿಎಸ್ ವೃತ್ತದವರೆಗೆ ಪಾದಯಾತ್ರೆ ತೆರಳಿ ಜಿಲ್ಲಾಧ್ಯಕ್ಷ ಅಧ್ಯಕ್ಷ ಆರ್. ರಾಮಕೃಷ್ಣ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ, ಐಟಿ ಇಲಾಖೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಕೆಲ ಕಾರ್ಯರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಇದಕ್ಕೂ ಮೊದಲು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಮಕೃಷ್ಣ, ರಾಜ್ಯದ ನೆರೆ ಸಂತ್ರಸ್ತರಿಗೆ ಬಿಡಿಗಾಸು ಬಿಡುಗಡೆ ಮಾಡದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಹಾಕಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ನಾಯಕರ ಮೇಲೆ ಆದಾಯ ತೆರಿಗೆ ದಾಳಿ ಮಾಡಿಸುವ ಕುತಂತ್ರ ಮಾಡುತ್ತದೆ ಎಂದರು.
ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮಥ್ರ್ಯವಿರುವ ಪಕ್ಷದ ನಾಯಕ ಆತ್ಮ ಸ್ಥೈರ್ಯ ಕುಗ್ಗಿಸಲು ಐಟಿ, ಇ.ಡಿ.ಯಂತಹ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡು ದಾಳಿ ಮಾಡಿಸುತ್ತಿದೆ. ದಲಿತರ, ಹಿಂದುಳಿದ ವರ್ಗಗಳವರಿಗೆ ಸೇರಿದ ವಿದ್ಯಾಸಂಸ್ಥೆಗಳ ಮೇಲೆ ದಾಳಿ ಮಾಡಿಸುವ ಮೂಲಕ ಕೇಂದ್ರ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, 50 ವರ್ಷಗಳಿಗೂ ಹಿಂದಿನಿಂದ ಒಳ್ಳೆ ಹೆಸರು ಮಾಡಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ನಡೆಸಿರುವುದು ಖಂಡನೀಯ. ಮಹಾರಾಷ್ಟ್ರದ ಚುನಾವಣೆಗೆ ಕಾಂಗ್ರೆಸ್ ಪರವಾಗಿ ಡಾ. ಪರಮೇಶ್ವರ್ ಅವರಿಗೆ ಪಕ್ಷ ಜವಾಬ್ದಾರಿ ನೀಡಲಿರುವುದನ್ನು ಮನಗಂಡು ಬಿಜೆಪಿ ಸರ್ಕಾರ ಅವರ ಆತ್ಮಸ್ಥೈರ್ಯ ಕುಗ್ಗಿಸಲು ಐಟಿ ದಾಳಿಯಂತಹ ಷಡ್ಯಂತರ ರೂಪಿಸುತ್ತಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ನಾರಾಯಣ ಮೂರ್ತಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಜನ ವಿರೋಧಿ ಆಡಳಿತ ಕ್ರಮದಿಂದ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಕಾಂಗ್ರೆಸ್ ನಾಯಕರನ್ನು ಗುರಿ ಮಾಡಿಕೊಂಡು ಇಂತಹ ದಾಳಿ ಮಾಡುತ್ತಿವೆ. ಇಂತಹ ಧೋರಣೆ ಖಂಡನೀಯ ಎಂದರು.
ನಗರ ಪಾಲಿಕೆ ಉಪ ಮೇಯರ್ ರೂಪಶ್ರೀ ಶೆಟ್ಟಳಯ್ಯ, ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತಿಕ್ ಅಹಮದ್, ಮುಖಂಡರಾದ ಕೊಂಡವಾಡಿ ಚಂದ್ರಶೇಖರ್, ಇಕ್ಬಾಲ್ ಅಹಮದ್, ಚಂದ್ರಶೇಖರ ಗೌಡ, ವೆಂಕಟಾಚಲಪತಿ, ಎ. ಡಿ. ಬಲರಾಮಯ್ಯ. ಹೆಚ್. ಎನ್ ದೀಪಕ್, ನರಸೀಯಪ್ಪ, ಸುಜಾತ, ಆಟೋರಾಜು, ಚೌದ್ರಿ ರಂಗಪ್ಪ, ರೇವಣ್ಣಸಿದ್ದಯ್ಯ, ಮಂಜುನಾಥ್, ಹೆಚ್. ಹನುಮಂತಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








