ತುಮಕೂರಿನ ಪಿ.ಹೆಚ್.ಕಾಲೋನಿ ಸೀಲ್ ಡೌನ್ : ವ್ಯಕ್ತಿಗೆ ಕೊರೊನಾ ಪಾಸಿಟೀವ್!!?

0
7012

ತುಮಕೂರು:

      ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 10ರ ಪಿ.ಎಚ್. ಕಾಲೋನಿ ಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

      ಪಿ ಎಚ್ ಕಾಲೋನಿ 12 ನೇ ಮುಖ್ಯರಸ್ತೆಯಲ್ಲಿರುವ ನಿಮ್ರಾ ಮಸೀದಿ ದಾರುಲ್ ಉಲೂಮ್ ಸಿದ್ದೀಬಿಯಾ ಮಸ್ಜಿದ್ ಎ ನಿಮ್ರಾ ಟ್ರಸ್ಟ್ ನ ಮಸೀದಿಯಲ್ಲಿ ಕ್ವಾರೆಂಟೈನ್ ನಲ್ಲಿದ್ದ 34 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಕಳೆದ ರಾತ್ರಿ ಈತನನ್ನ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವ್ಯಕ್ತಿಯನ್ನ ಬೆಂಗಳೂರಿಗೆ ರವಾನೆ ಮಾಡಲಾಗಿದೆ.

      ಇನ್ನು ಈತನ ಜೊತೆಯಲ್ಲಿದ್ದ ಉಳಿದ 13 ಮಂದಿಯನ್ನ ಮಸಿದಿಯಲ್ಲೆ ಕ್ವಾರೆಂಟೈನ್ ಮಾಡಲಾಗಿದೆ. ಪಿ.ಎಚ್. ಕಾಲೋನಿಯ ನಿಮ್ರಾ ಮಸೀದಿ ಸುತ್ತ 150 ಮೀಟರ್ ಸೀಲ್‌ಡೌನ್ ಮಾಡಲಾಗಿದೆ. ಎಲ್ಲಾ ಸಂಪರ್ಕ ರಸ್ತೆಗಳನ್ನ ಕಬ್ಬಿಣದ ಶೀಟ್ ಗಳಿಂದ ಬಂದ್ ಮಾಡಲಾಗಿದೆ.

       ಮಸೀದಿಯ ಸುತ್ತಲು 150 ಮೀಟರ್ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ ಜನರು ಹೊರಬರದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿರುವ ಎಲ್ಲರನ್ನ ತಪಾಸಣೆಗೆ ಒಳಪಡಿಸುವ ಸಾಧ್ಯತೆ ಇದೆ. ಜನರಿಗೆ ಬೇಕಾದ ಅಗತ್ಯ ದಿನಸಿ ವಸ್ತುಗಳು ಮನೆಬಾಗಿಲಿಗೆ ಬರುತ್ತದೆ ದಯವಿಟ್ಟು ಮನೆ ಬಾಗಿಲಿಗೆ ಬರಬೇಡಿ ಎಂದು ಪೋಲಿಸರು ಮನವಿ ಮಾಡಿದ್ದಾರೆ.

       ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಕಾರ್ಪೊರೇಟರ್ ಪತಿಯೊಬ್ಬ ಸುಬೇದ್ ಎಂಬಾತ ಜನರಿಗೆ ಹಾಲು ಹಂಚಲು ಮಸಿದಿಯ ಬಳಿ ತೆರಳಲು ಮುಂದಾದಾಗ ಪೊಲೀಸರು ತಡೆದು ಒಳಹೋಗಲು ಅವಕಾಶ ನೀಡದೇ ಜನರ ರಕ್ಷಣೆಗೆ ಪೋಲಿಸರು ಹಗಲಿರುಳು ಶ್ರಮಿಸುತ್ತಿದ್ದಾರೆ ನೀವೇನು ತಮಾಷೆ ಮಾಡ್ತಿದ್ದಿರಾ ಎಂದು ನಗರ ಠಾಣೆ ಇನ್ ಸ್ಪೆಕ್ಟರ್  ನವೀನ್ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

      ಸ್ಥಳಕ್ಕೆ ಉಪವಿಭಾಗಾಧಿಕಾರಿ ಅಜಯ್ , ತಹಸಿಲ್ದಾರ್ ಮೋಹನ್ ಕುಮಾರ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಿ ಸೀಲ್ ಡೌನ್ ಗೆ ಸಂಬಂದಿಸಿದಂತೆ ಪರಿಶೀಲನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ