ತುಮಕೂರು :
ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಗಂಗಾ ಮಠದ ಶತಾಯುಷಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಪಿತ್ತನಾಳದ ಸೋಂಕು ನಿವಾರಣೆಗಾಗಿ ವೈದ್ಯರು ಶ್ರೀಗಳಿಗೆ ಪಿತ್ತನಾಳ ಭಾಗದಲ್ಲಿ ಮತ್ತೆರಡು ಸ್ಟೆಂಟ್ ಅಳವಡಿಸಿದ್ದಾರೆ. ಬಳಿಕ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಸೋಂಕು ಕಡಿಮೆಯಾಗಿದೆ. ಆದರೆ, ರಕ್ತದಲ್ಲಿ ಹೆಚ್ಚಿನ ಸೋಂಕು ಇದ್ದಿದ್ದರಿಂದ ನಿನ್ನೆ ರಾತ್ರಿಯಿಡೀ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿತ್ತು.
ಸಾಮಾನ್ಯವಾಗಿ ಸ್ಟೆಂಟ್ ಅಳವಡಿಕೆ ಬಳಿಕ ಐಸಿಯುಗೆ ವರ್ಗಾಯಿಸುವುದು ಸಾಮಾನ್ಯ. ಆದರೆ, ಶ್ರೀಗಳು ವಾರ್ಡ್ಗೆ ತೆರಳಿದರು. ಅನಸ್ತೇಶಿಯಾ ಪರಿಣಾಮ ಸಂಪೂರ್ಣ ಕಡಿಮೆಯಾದ ಬಳಿಕ ಆಸ್ಪತ್ರೆಯಲ್ಲೇ ಶಿವಪೂಜೆ ನೆರವೇರಿಸಿದ್ದು, ಆಹಾರ ಸೇವಿಸಿದ್ದಾರೆ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡದ ಮುಖ್ಯಸ್ಥ ಡಾ.ರವೀಂದ್ರ ತಿಳಿಸಿದರು.
ಸೋಮವಾರ ಬೆಳಗಿನವರೆಗೆ ಶ್ರೀಗಳ ಆರೋಗ್ಯದ ಮೇಲೆ ನಿಗಾವಹಿಸಿ, ಬೆಳಗ್ಗೆ ಮತ್ತೊಂದು ಸುತ್ತಿನ ರಕ್ತಪರೀಕ್ಷೆ ಹಾಗೂ ಇತರೆ ಆರೋಗ್ಯ ತಪಾಸಣೆಗಳನ್ನು ನಡೆಸಿ, ಸ್ವಾಮೀಜಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮಠಕ್ಕೆ ಕಳುಹಿಸಿಕೊಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ