ತುಮಕೂರು : ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪೈಪ್‍ಗಳಲ್ಲಿ ಕಿಡಿಹೊತ್ತಿ ಹಾನಿ!!

ತುಮಕೂರು:

      ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳು ದಿನೆ ದಿನೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಲೇ ಇವೆ. ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಜನತೆ ತತ್ತರಿಸಿ ಹೋಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಎಸ್.ಎಸ್.ಪುರಂನ ತೋಟಗಾರಿಕಾ ರಸ್ತೆಯಲ್ಲಿ ಮಧ್ಯರಾತ್ರಿ ನಡೆದಿರುವ ಒಂದು ಕಾಮಗಾರಿಯೇ ಸಾಕ್ಷಿ.

      ಎಸ್.ಎಸ್.ಪುರಂನ 15ನೇ ಕ್ರಾಸ್‍ನಲ್ಲಿ ಬುಧವಾರ ರಾತ್ರಿ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ನಡೆಸಲಾಗಿದೆ. ಜೆಸಿಬಿ ಮೂಲಕ ಇಲ್ಲಿ ಕಾಮಗಾರಿ ನಡೆಸುತ್ತಿದ್ದಾಗ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಇದರಿಂದಾಗಿ ಎಲೆಕ್ಟ್ರಿಸಿಟಿ ಕೇಬಲ್ ವರ್ಕ್, ನೀರು ಸರಬರಾಜು ಲೈನ್, ಗ್ಯಾಸ್ ಲೈನ್, ಯುಜಿಡಿ ಲೈನ್ ಸೇರಿದಂತೆ ಎಲ್ಲವೂ ಹಾನಿಯಾಗಿದೆ. ರಾತ್ರಿ ವೇಳೆ ನಡೆದ ಈ ಕಾಮಗಾರಿಯಿಂದಾಗಿ ಆ ಭಾಗದ ಜನತೆ ಆತಂಕಕ್ಕೆ ಒಳಗಾಗಿದ್ದರು. ಕೂಡಲೇ ಸಂಬಂಧಿಸಿದವರಿಗೆ ಕರೆ ಮಾಡಿ ತಿಳಿಸಲಾಯಿತು. ಸ್ಥಳಕ್ಕೆ ಮೇಯರ್ ಫರೀದಾ ಬೇಗಂ, ಕಾರ್ಪೋರೇಟರ್ ಗಿರಿಜಾ ಧನ್ಯಕುಮಾರ್, ಇಂಜಿನಿಯರ್‍ಗಳು ಭೇಟಿ ನೀಡಿದ್ದರು. ಬೆಳಗಿನಿಂದ ಮಧ್ಯಾಹ್ನದವರೆಗೆ ಅಲ್ಲಿ ಕಾಮಗಾರಿಗಳನ್ನು ಸರಿಪಡಿಸುವ ಕಾರ್ಯ ನಡೆಯಿತು.

     ಕಾಮಗಾರಿಗಳನ್ನು ಹಗಲಿನ ವೇಳೆ ಕೈಗೊಳ್ಳುವುದು ಸೂಕ್ತ. ರಾತ್ರಿವೇಳೆ ಕಾಮಗಾರಿಗಳನ್ನು ನಡೆಸುವಾಗ ಇಂತಹ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ? ಒಂದು ವೇಳೆ ಅಲ್ಲಿ ಬೆಂಕಿ ತಗುಲಿ ಸುತ್ತಮುತ್ತ ಹರಡಿದ್ದರೆ ಅಪಾಯ ಮತ್ತಷ್ಟು ಹೆಚ್ಚಾಗುತ್ತಿತ್ತು. ಇವೆಲ್ಲವನ್ನೂ ಸಂಬಂಧಪಟ್ಟವರು ಗಮನಿಸಬೇಕಲ್ಲವೆ ಎನ್ನುತ್ತಾರೆ ಆ ಭಾಗದ ಸಾರ್ವಜನಿಕರು.

      ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅಡಿಯಲ್ಲಿ ವಿವಿಧ ಹಂತದ ಯೋಜನೆಗಳನ್ನು ಕೈಗೊಳ್ಳಲಾಗಿದೆ. ರಸ್ತೆ ಅಗೆತ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳುವಾಗ ಸಂಬಂಧಪಟ್ಟ ಇಲಾಖೆಗಳವರಿಗೆ ಮಾಹಿತಿ ಇರಬೇಕು. ಆದರೆ ಯಾವುದೇ ಮಾಹಿತಿ ಇಲ್ಲದೆ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರು ದಿನೆ ದಿನೆ ಬವಣೆ ಪಡಬೇಕಾಗಿದೆ ಎನ್ನುತ್ತಾರೆ ಜನತೆ.

      ಸ್ಮಾರ್ಟ್‍ಸಿಟಿ ಕಾಮಗಾರಿಯಿಂದಾಗಿ ಸ್ಥಳೀಯರಿಗೆ ತೊಂದರೆಯಾಗಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಕಾಮಗಾರಿ ನಿರ್ವಹಿಸುತ್ತಿರುವುದು ಸರಿಯಾದ ಕ್ರಮವಲ್ಲ. ಸ್ಮಾರ್ಟ್‍ಸಿಟಿ ಅಧಿಕಾರಿಗಳು ಜನತೆಯ ಕರೆಗೆ ಸ್ಪಂದಿಸಬೇಕು. ಪ್ರಸ್ತುತ ರಾತ್ರಿ ನಡೆದ ಕಾಮಗಾರಿಯಿಂದ ಹೇಮಾವತಿ ಪೈಪ್‍ಲೈನ್ ಕಡಿತಗೊಂಡಿದ್ದು, ನೀರು ಪೋಲಾಗಿದೆ ಎಂದು ಗಿರಿಜಾ ಧನಿಯಾಕುಮಾರ್ ತಿಳಿಸಿದರು. ಮೇಯರ್ ಫರಿದಾ ಬೇಗಂ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link