ತುಮಕೂರು :
ಕ್ಷೇತ್ರದ ಜನರೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ ಎಂಬ ಕಾರಣವನ್ನು ನೀಡಿ, ಬಿಜೆಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರು ಸೋಮವಾರ ರಾಜಿನಾಮೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಬಿ.ಸುರೇಶ್ ಗೌಡ ಅವರು, ಜಿಲ್ಲಾ ಘಟಕದ ಅಧ್ಯಕ್ಷನಾದ ಮೇಲೆ ಪಕ್ಷದ ಕೆಲಸಗಳ ಕಾರಣ ನನ್ನ ಕ್ಷೇತ್ರದ ಜನರೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು, ಕ್ಷೇತ್ರ ಜನರ ಕಷ್ಟಸುಖಗಳಲ್ಲಿ ಭಾಗಿಯಾಗಲು ಹೆಚ್ಚು ಸಮಯವೇ ಸಿಗುತ್ತಿರಲಿಲ್ಲ. ಕೋವಿಡ್‍ನಿಂದ ಆರ್ಥಿಕ ಹಿಂಜರಿತ, ನೀರಾವರಿ ಸಮಸ್ಯೆಯಿಂದ ಜನರು ಅನುಭವಿಸುತ್ತಿರುವ ಬವಣೆ, ಶಿಕ್ಷಣದ ಗುಣಮಟ್ಟದ ಕುಸಿತದಿಂದ ಕ್ಷೇತ್ರದ ಮಕ್ಕಳು ಅನುಭವಿಸುತ್ತಿರುವ ಯಾತನೆಯ ಹಿನ್ನೆಲೆಯಲ್ಲಿ ಅವರೊಂದಿಗೆ ಸದಾ ಸಮಯ ಇರಬೇಕೆನ್ನಿಸುತ್ತಿತ್ತು. ನನ್ನ ಕ್ಷೇತ್ರದ ಜನರೇ ನನಗೆ ಎಲ್ಲವೂ ಆಗಿರುವುದರಿಂದ ಅವರೊಂದಿಗೆ ಇರಲು ರಾಜೀನಾಮೆ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾದ ಬಳಿಕ ಹಲವು ಸವಾಲುಗಳು ಎದುರಾದವು. ಲೋಕಸಭಾ ಚುನಾವಣೆ ಜತೆಗೆ, ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯೂ ಒಂದಾಗಿತ್ತು. ಶಿರಾ ತಾಲ್ಲೂಕಿನ ಜನರು ನನ್ನ ಬಗ್ಗೆ ಪ್ರೀತಿ ತೋರಿ ಪಕ್ಷದ ಪರ ನಿಂತರು. ಜಿಲ್ಲೆಯ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳ ಜನರು, ವಿಶೇಷವಾಗಿ ನನ್ನ ತುಮಕೂರು ಗ್ರಾಮಾಂತರ ಕ್ಷೇತ್ರದ ನನ್ನ ಪ್ರೀತಿಯ ಜನರು, ಅಭಿಮಾನಿಗಳು ನನ್ನ ಪರವಾಗಿ ಶಿರಾ ಜನರಲ್ಲಿ ಪ್ರೀತಿ, ಅಭಿಮಾನ ಉಕ್ಕುವಂತೆ ಮಾಡಿದರು. ಪರಿಣಾಮವಾಗಿ ನೆಲೆಯೇ ಇಲ್ಲದ ಶಿರಾದಲ್ಲಿ ನನ್ನ ನೇತೃತ್ವದಲ್ಲಿ ಪಕ್ಷ ಗೆಲ್ಲುವಂತಾಯಿತು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ