ಚಿಕ್ಕಬಳ್ಳಾಪುರ :
ಕಾಫಿ ಸೇವಿಸಿ ತಾಯಿ ಮತ್ತ ಮಗಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.
ಗ್ರಾಮದ ಅಕ್ಕಲುಮ್ಮ (70) ಮತ್ತು ನರಸಮ್ಮ (50) ಕಾಫಿ ಕುಡಿದು ಮೃತಪಟ್ಟ ದುರ್ದೈವಿಗಳು. ನರಸಮ್ಮನ ಮೊಮ್ಮಕ್ಕಳಾದ ಅರವಿಂದ್ (7) ಹಾಗೂ ಆರತಿ (5) ಅಸ್ವಸ್ಥರಾಗಿದ್ದು ಅವರನ್ನು ಕೋಲಾರದ ಎಸ್ ಎನ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಕುಟುಂಬದವರು ಸ್ವಗ್ರಾಮದ ಅಂಗಡಿಯೊಂದರಲ್ಲಿ ಕಾಫಿಪುಡಿ ಖರೀದಿಸಿದ್ದರು. ಬಳಿಕ ಶನಿವಾರ ಬೆಳಗ್ಗೆ ಎಲ್ಲರೂ ಕಾಫಿ ಮಾಡಿಕೊಂಡು ಕುಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಎಲ್ಲರಿಗೂ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದಾರೆ.
ಕಾಫಿಯಲ್ಲಿ ಸಾಯುವಂತಹ ಅಂಶ ಏನಿತ್ತು, ಯಾರಾದರೂ ಉದ್ದೇಶಪೂರ್ವಕವಾಗಿಯೇ ಕಾಫಿಪುಡಿ ಅಥವಾ ಹಾಲಿಗೆ ವಿಷ ಬೆರೆಸಿದ್ದರಾ ಎನ್ನುವ ಕುರಿತು ಅನುಮಾನ ವ್ಯಕ್ತಪಡಿಸಲಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಗೇಪಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ