ಬೆಂಗಳೂರು:
ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ರೆಬೆಲ್ ಮುಖಂಡ ಉಮೇಶ್ ಜಾಧವ್ ನಾಳೆ (ಮಾರ್ಚ್ 6)ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಈ ಕುರಿತು ನಗರದಲ್ಲಿ ಸ್ಪಷ್ಟಪಡಿಸಿರುವ ಅವರು, ನಾಳೆ ನಡೆಯಲಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮೋದಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಸಂಜೆ ಮತ್ತೊಮ್ಮೆ ಆಪ್ತರ ಸಮ್ಮುಖದಲ್ಲಿ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ನಾಳೆ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸಮಾವೇಶ ನಡೆಯಲಿದ್ದು, ಈ ವೇಳೆ ಅಧಿಕೃತವಾಗಿ ಜಾಧವ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಲೋಕಸಭಾ ಕಾಂಗ್ರೆಸ್ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿ ಸೋಲಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಜಾಧವ್ ಅವರು ಖರ್ಗೆ ವಿರುದ್ಧ ಕಲಬರಗಿಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಇನ್ನು ಕಾಂಗ್ರೆಸ್ ಪಕ್ಷದ ಬಂಡಾಯ ನಾಯಕ ಉಮೇಶ್ ಜಾಧವ್ ರಾಜಿನಾಮೆ ವಿಚಾರ ಸಮನ್ವಯ ಸಮಿತಿಯಲ್ಲಿ ಕೂಡ ಚರ್ಚೆಯಾಗಿದ್ದು, ಬೆಂಗಳೂರಿನ ಕೆಕೆ ಗೆಸ್ಟ್ ಹೌಸ್ ನಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ನಡೆಯುತ್ತಿದೆ.