ಜಿ.ಪರಮೇಶ್ವರ್‌ ಅಣ್ಣನ ಮಗಳೆಂದು ಹೇಳಿ ವಂಚಿಸುತ್ತಿದ್ದಾಕೆ ಖಾಕಿ ಬಲೆಗೆ!!

ಬೆಂಗಳೂರು :

    ತಾನು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್‌ ಅವರ ಅಣ್ಣನ ಮಗಳೆಂದು ಹೇಳಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದ ಮಹಿಳೆಯನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.

     ಜ್ಞಾನ ಗಂಗಾ ಲೇಔಟ್‌ ನಿವಾಸಿ ಪಲ್ಲವಿ (32) ಬಂಧಿತ ಆರೋಪಿತೆ. ವಿದ್ಯಾವಂತ, ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿತೆ, ಸ್ವಯಂ ಉದ್ಯೋಗಕ್ಕೆ ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ನಂಬಿಸಿ, ನಂತರ ಹಣ ಪಡೆದು 10ಕ್ಕೂ ಹೆಚ್ಚು ಜನರಿಗೆ ಸಾಲ‌ಕೊಡಿಸದೇ ವಂಚಿಸಿದ್ದಾಳೆ ಎಂಬ ಆರೋಪಿಸಲಾಗಿದೆ.

     ಜನಾರ್ದನ್‌ ಎಂಬುವವರಿಗೆ ಆರೋಪಿತೆ ಪಲ್ಲವಿ, ಮಾಜಿ ಡಿಸಿಎಂ ಪರಮೇಶ್ವರ್‌ ಅವರ ಅಣ್ಣನ ಮಗಳಾಗಿದ್ದು, ನಾನು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕ್ ನಿಂದ ಸಾಲ ಕೊಡಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ 2 ದಿನದ ಮಟ್ಟಿಗೆ ಕಾರು ಬಾಡಿಗೆಗೆ ಬೇಕು ಎಂದು ರಾಜಶೇಖರ್‌ ಬಳಿ ಕೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕಾರು ಚಾಲಕ ಯೋಗೇಶ್‌ ಪಲ್ಲವಿಯನ್ನು ಸಂಪರ್ಕಿಸಿದ್ದರು.

      ಎರಡು ದಿನ ಬೆಂಗಳೂರು, ತುಮಕೂರಿಗೆ ಕಾರಿನಲ್ಲಿ ಸುತ್ತಾಡಿದ ಆಕೆ ಬಾಡಿಗೆ ನೀಡಿ ನಂತರ ತಾನು ಕರೆದಾಗೆಲ್ಲ ಬಾಡಿಗೆಗೆ ಬರಬೇಕು ಎಂದು ಸೂಚಿಸಿದ್ದಳು. ನಂತರ ಹಲವು ಬಾರಿ ಬಾಡಿಗೆ ಪಡೆದಿದ್ದು ಒಟ್ಟು 40 ಸಾವಿರ ಕಿ.ಮೀ ಸುತ್ತಾಡಿಸಿ 4 ಲಕ್ಷ ರೂ. ಬಾಡಿಗೆ ಉಳಿಸಿಕೊಂಡಿದ್ದಳು. ಯೋಗೇಶ್‌ ಬಾಡಿಗೆ ದುಡ್ಡು ಕೇಳಿದಾಗೆಲ್ಲ ಕುಂಟು ನೆಪ ಗಳನ್ನು ಹೇಳಲು ಆರಂಭಿಸಿದಳು. ಬಾಡಿಗೆ ನೀಡಲೇಬೇಕು ಎಂದು ಯೋಗೇಶ್ ಖಡಾಖಂಡಿತವಾಗಿ ಹೇಳಿದಾಗ ಯೋಗೇಶ್‌ ನೊಂದಿಗೆ ಪ್ರೀತಿಯ ನಾಟಕವಾಡಲು ಶುರುಮಾಡಿದಳು. ಇದಕ್ಕೆ ಯೋಗೇಶ್‌ ನಿರಾಕರಿಸಿದಾಗ ಆರೋಪಿತೆ ಪಲ್ಲವಿ, ನನ್ನನ್ನು ನೀನು ಮದುವೆಯಾಗದಿದ್ದರೇ ನಿನ್ನ ವಿರುದ್ಧ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು.

      ನಂತರ ಪಲ್ಲವಿಯ ಈ ನಡೆಯನ್ನು ಯೋಗೇಶ್‌, ತಮ್ಮ ಮಾಲಿಕ ಜನಾರ್ದನ್‌ ಅವರಿಗೆ ತಿಳಿಸಿದ್ದರು. ಪಲ್ಲವಿಯ ವರ್ತನೆಯಿಂದ ಅನುಮಾನಗೊಂಡ ಜನಾರ್ದನ್‌ ಮತ್ತು ಯೋಗೇಶ್‌ ಸದಾಶಿವ ನಗರದಲ್ಲಿರುವ ಪರಮೇಶ್ವರ್‌ ಅವರ ನಿವಾಸಕ್ಕೆ ಪಲ್ಲವಿಯನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಪರಮೇಶ್ವರ್‌ ಅವರ ಪತ್ನಿ ಈಕೆ ಯಾರು ಎಂಬುದೇ ತಮಗೆ ಗೊತ್ತಿಲ್ಲ . ಯಜಮಾನರು ತುಮಕೂರಿನಲ್ಲಿದ್ದಾರೆ ಎಂದು ತಿಳಿಸಿದ್ದರು.

     ಬಳಿಕ ನೇರವಾಗಿ ಪಲ್ಲವಿಯನ್ನು ತುಮಕೂರಿಗೆ ಕರೆದುಕೊಂಡು ಹೋಗಿ ಪರಮೇಶ್ವರ್‌ ಅವರ ಸಮಕ್ಷಮದಲ್ಲಿ ವಿಚಾರಣೆ ನಡೆಸಿದಾಗ, ಈಕೆ ಯಾರೆಂಬುದೇ ತಮಗೆ ಗೊತ್ತಿಲ್ಲ. ಕೂಡಲೇ ದೂರು ನೀಡಿ ಎಂದು ಸೂಚಿಸಿದ್ದರು.
ನಂತರ ಪಲ್ಲವಿಯನ್ನು ತುಮಕೂರಿನಿಂದ ಕರೆ ತರುತ್ತಿದ್ದಾಗ ಕೆಂಗೇರಿ ಸಮೀಪ ತಾನು ಮೂತ್ರ ವಿಸರ್ಜನೆ ಮಾಡಬೇಕು ಎಂದು ಹೇಳಿ ಕಾರನ್ನು ನಿಲ್ಲಿಸಿದ್ದಳು. ಈ ವೇಳೆ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿದ ಪಲ್ಲವಿ, ಯೋಗೇಶ್‌ ಮತ್ತು ಇತರರು ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಹೇಳಿದ್ದಳು. ಕರೆ ಬಂದ ಹಿನ್ನೆಲೆಯಲ್ಲಿ ಜಾಗೃತಗೊಂಡ ಕೆಂಗೇರಿ ಪೊಲೀಸರು ಯೋಗೇಶ್‌ಗೆ ಕರೆ ಮಾಡಿ, ಪಲ್ಲವಿ ಎಂಬಾಕೆಯನ್ನು ಅಪಹರಣ ಮಾಡಿದ್ದೀರಿ ಎಂದು ಕಂಟ್ರೋಲ್‌ ರೂಂಗೆ ದೂರು ಬಂದಿದೆ. ತಕ್ಷಣವೇ ಆಕೆಯನ್ನು ಪೊಲೀಸ್‌ ಠಾಣೆಗೆ ಕರೆ ತನ್ನಿ ಎಂದು ಸೂಚಿಸಿದ್ದರು.

G Parameshwara, Koratagere constituency Karnataka election results 2018:  Congress wins - The Financial Express

     ಬಳಿಕ ಪೊಲೀಸರ ಸೂಚನೆಯ ಮೇರೆಗೆ ಪಲ್ಲವಿಯನ್ನು ಕೆಂಗೇರಿ ಠಾಣೆಗೆ ಕರೆದೊಯ್ಯಲಾಗಿತ್ತು. ಪೊಲೀಸ್‌ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಪರಮೇಶ್ವರ್‌ ಅವರ ಅಣ್ಣನ ಮಗಳು ಎಂದು ಹೇಳಿ ತಾವು ಹಲವು ಜನರಿಗೆ ಮೋಸ ಮಾಡಿದ್ದನ್ನು ಪಲ್ಲವಿ ತಪ್ಪೊಪ್ಪಿಕೊಂಡಿದ್ದಾಳೆ.

     ವಿಚಾರಣೆ ಅಂತ್ಯಗೊಂಡ ನಂತರ ಕೆಂಗೇರಿ ಪೊಲೀಸರು ಜ್ಞಾನ ಭಾರತಿ ಪೊಲೀಸ್‌ ಠಾಣೆಯಲ್ಲಿ ಈಕೆಯ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದರು.ಮಹಿಳಾ ಪೊಲೀಸರ ಬೆಂಗಾವಲಿನಲ್ಲಿ ಈಕೆಯನ್ನು ಕರೆತಂದ ಬಳಿಕ ಜ್ಞಾನ ಭಾರತಿ ಠಾಣೆಯಲ್ಲಿ ದೂರು ದಾಖಲಿಸಿ ಬಂಧಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap