ಯಾದಗಿರಿ:
ಜಿಲ್ಲೆಯ ಸುರಪುರ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಕಿಡಿಗೇಡಿಗಳು ಕ್ರಿಮಿನಾಶಕ ಬೆರೆಸಿದ ಪರಿಣಾಮ ವೃದ್ಧೆಯೊಬ್ಬರು ರಕ್ತವಾಂತಿ ಮಾಡಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಪಂಪ್ ಆಪರೇಟರ್ ಮೌನೇಶ್ ತಾಯಿ ಹೊನ್ನಮ್ಮ ಚಿಕಿತ್ಸೆ ಫಲಿಸದೇ ರಕ್ತ ವಾಂತಿ ಮಾಡಿಕೊಂಡು ಇಂದು ಮೃತಪಟ್ಟಿದ್ದಾರೆ. ಬುಧವಾರ ತಪಾಸಣೆಗೆಂದು ಕ್ರಿಮಿನಾಶಕ ಬೆರೆಸಿದ ಕುಡಿಯುವ ನೀರು ಕುಡಿದು ಹೊನ್ನಮ್ಮ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಯಾದಗಿರಿಯ ಕೆಂಬಾವಿಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ನೀರಿನ ಟ್ಯಾಂಕ್ನಲ್ಲಿ ಅರ್ಧ ಲೀಟರ್ ನಷ್ಟು ಎಂಡೋ ಸಲ್ಫಾನ್ ಕ್ರಿಮಿನಾಶಕ ಬೆರೆಸಲಾಗಿದೆ. ಈ ಟ್ಯಾಂಕ್ನಿಂದ ತಾಲೂಕಿನ ಶಖಾಪುರ, ತೆಗ್ಗಳ್ಳಿ ಗ್ರಾಮಕ್ಕೆ ನೀರು ಪೂರೈಕೆಯಾಗಿದೆ. ನೀರಿನ ಟ್ಯಾಂಕ್ನಲ್ಲಿ ಕ್ರಿಮಿನಾಶಕ ಬೆರೆಸಿದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಶಖಾಪುರ, ತೆಗ್ಗಳ್ಳಿ ಗ್ರಾಮಗಳಿಗೆ ತಕ್ಷಣ ನೀರು ಪೂರೈಕೆ ಸ್ಥಗಿತಗೊಳಿಸಲಾಯಿತು.
ನೀರು ಸೇವಿಸದಂತೆ ಗ್ರಾಮಗಳಲ್ಲಿ ಡಂಗೂರ ಸಾರಲಾಯಿತು. ಮುದನೂರು ಗ್ರಾಮಕ್ಕೆ ಜಿ.ಪಂ ಸಿಇಒ ಕವಿತಾ ಮನ್ನಿಕೇರಿ ಸುರಪುರ ತಹಸೀಲ್ದಾರ್ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ್ದರಿಂದ ಹಲವರು ಅಸ್ವಸ್ಥರಾಗಿ ಮಹಿಳೆಯೊಬ್ಬರು ಮೃತರಾದ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವಿವರ ಪಡೆದಿದ್ದು ಕೂಡಲೇ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ.
ಈ ಪ್ರಕರಣದ ಆಗ್ಗೆ ತ್ವರಿತವಾಗಿ ತನಿಖೆ ನಡೆಸಿ ಇಂತಹ ದುಷ್ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/1-2.jpg)