ಪತ್ನಿಯ ಬಾಯ್ ಫ್ರೆಂಡ್ ನಿಂದ ಪತಿಯ ಬರ್ಬರ ಹತ್ಯೆ!!

ಬೆಂಗಳೂರು: 

     ಪತ್ನಿಬೇರೊಬ್ಬನೊಂದಿಗೆ ವಾಸ ಮಾಡುತ್ತಿದ್ದರೂ ಆಕೆಗೆ ಕಿರುಕುಳ ನೀಡುತ್ತಿದ್ದ ಗಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನೆಟ್ಕಲಪ್ಪ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ಬಳಿ ನಡೆದಿದೆ.

      ಚಾಮರಾಜನಗರದ ಕೊಳ್ಳೇಗಾಲ ಮೂಲದ ಲಾರಿ ಕ್ಲೀನರ್ ಸಿದ್ದರಾಜು (26) ಕೊಲೆಗೀಡಾದ ಯುವಕ.

ಕೊಲೆಯ ಹಿನ್ನೆಲೆ :

       6 ತಿಂಗಳ ಹಿಂದೆ ಲತಾ ಎಂಬಾಕೆಯನ್ನು ಮದುವೆಯಾಗಿದ್ದ ಸಿದ್ದರಾಜು, ಆಕೆಯನ್ನು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಕರೆತಂದಿದ್ದ. ಈ ಮಧ್ಯೆ, ಕುಡಿತದ ಚಟಕ್ಕೆ ಬಿದ್ದ ಸಿದ್ದರಾಜು ದಿನಾ ಕುಡಿದು ಬಂದು ಪತ್ನಿಯ ಜೊತೆ ಜಗಳ ತೆಗೆಯುತ್ತಿದ್ದ.

      ಇದರಿಂದ ಬೇಸತ್ತಿದ್ದ ಲತಾಗೆ ಹೂವಿನ ವ್ಯಾಪಾರಿ ಲಕ್ಷ್ಮಣ ಎಂಬಾತನ ಪರಿಚಯವಾಗಿತ್ತು. ಕಾಲ ಕಳೆದಂತೆ, ಸಿದ್ದರಾಜುವಿನ ಕುಡಿತದಿಂದ ರೋಸಿ ಹೋಗಿದ್ದ ಲತಾ, ಗಂಡನನ್ನು ತೊರೆದು ಲಕ್ಷ್ಮಣ ಅಲಿಯಾಸ್ ಲಚ್ಚಿ ಜೊತೆ ವಾಸ ಮಾಡಲು ಪ್ರಾರಂಭಿಸಿದಳು. ಈ ವಿಚಾರ ತಿಳಿದ ಸಿದ್ದರಾಜು ದಿನಾ ಕುಡಿದು ಬಂದು ಲಕ್ಷ್ಮಣನ ಮನೆ ಬಳಿ ಗಲಾಟೆ ಮಾಡುತ್ತಿದ್ದ.

     ನಿನ್ನೆ ಇದೇ ವಿಚಾರವಾಗಿ ಲಕ್ಷ್ಮಣ ತನ್ನ ಗೆಳೆಯರನ್ನು ಒಂದು ಕಡೆ ಸೇರಿಸಿಕೊಂಡಿದ್ದ. ಗೆಳೆಯರ ಜೊತೆಗೂಡಿ ಸಿದ್ದರಾಜುನನ್ನು ಆಟೋದಲ್ಲಿ ಕರೆದೊಯ್ದು ಕಂಠಪೂರ್ತಿ ಕುಡಿಸಿ, ರಾತ್ರಿ 9.30ರ ಸುಮಾರಿಗೆ ನೆಟ್ಕಲಪ್ಪ ಸರ್ಕಲ್ ಬಳಿಯ ಖಾಸಗಿ ಹೊಟೆಲ್ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

      ನಿನ್ನೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ಕಂಟ್ರೋಲ್‌ ರೂಮ್‌ಗೆ ಸಾರ್ವಜನಿಕರೊಬ್ಬರು ಕರೆ ಮಾಡಿ, ಬಸವನಗುಡಿಯ ಸುಬ್ಬಣ್ಣ ಚೆಟ್ಟಿ ರಸ್ತೆಯಲ್ಲಿ ಮೃತದೇಹವೊಂದು ಬಿದ್ದಿದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ