ಉಡುಪಿ:
ಯಕ್ಷಗಾನ ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ಖ್ಯಾತ ಯಕ್ಷಗಾನ ಕಲಾವಿದ ಹುಡುಗೋಡು ಚಂದ್ರಹಾಸ (52) ರಂಗಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರದಲ್ಲಿ ಭಾನುವಾರ (ಮಾ.10) ನಡೆದಿದೆ.
ಕಲಾಧರ ಯಕ್ಷಗಾನ ಬಳಗ ಜಲವಳ್ಳಿ, ಈ ಮೇಳದ ವತಿಯಿಂದ ನಡೆಯುತ್ತಿದ್ದ ಯಕ್ಷಗಾನದಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸಿ ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸಿದ ಹುಡುಗೋಡು ಚಂದ್ರಹಾಸ ಅವರು ಭೀಷ್ಮ ಎನ್ನುವ ಉದ್ಘಾರ ಮಾಡುತ್ತಲೆ ವೇದಿಕೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಅವರನ್ನು ತಕ್ಷಣ ಸಹಕಲಾವಿದರು ಮತ್ತು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿದರು.
ಎಲ್ಲರೂ ನೋಡನೋಡುತ್ತಿದ್ದಂತೆ ಚಂದ್ರಹಾಸ್ ರಂಗಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತದಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಂದ್ರಹಾಸ ಅವರ ಪುತ್ರ ಪ್ರದೀಪ್ ಸಹ ಪ್ರಸಂಗದಲ್ಲಿ ಭಾಗಿಯಾಗಿದ್ದರು. ಇಡೀ ರಾತ್ರಿಯ ಪ್ರದರ್ಶನವನ್ನು ರದ್ದುಪಡಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ