ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ರಿಲೀಸ್ ಆಗಲು ಇನ್ನೂ ಕೆಲವೇ ಗಂಟೆಗಳು ಬಾಕಿಯಿವೆ. ಕನ್ನಡ ವರ್ಷನ್ ಕೆಜಿಎಫ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹಾಗೆಯೇ ಇತರೆ ನಾಲ್ಕು ಭಾಷೆಗಳಲ್ಲೂ ರಿಲೀಸ್ ಆಗುತ್ತಿದ್ದು ನಟ ಯಶ್ ಕನಸು ನನಸಾಗುತ್ತಿದೆ, ಸಿನಿಮಾ ಶೂಟಿಂಗ್ ಗೆ ತೆಗೆದುಕೊಂಡ ಸಮಯ ಬಹಳ ದೀರ್ಘವಾಗಿತ್ತು, ಸುಮಾರು ಎರಡೂವರೆ ವರ್ಷ ಕಾಲ ಚಿತ್ರೀಕರಣ ನಡೆದಿದೆ.
ರಾಕಿ ಪಾತ್ರಕ್ಕಾಗಿ ಯಶ್ ತುಂಬಾ ವರ್ಕೌಟ್ ಮಾಡಿದ್ದಾರೆ, ಮೊದಲಿಗೆ ಪಾತ್ರದ ಬಗ್ಗೆ ಕೇಳಿ ನಂತರ ಬಾಡಿ ಲಾಂಗ್ವೇಜ್ ಸೇರಿದಂತೆ ಹಲವು ವರ್ತನೆ, ನೋಟಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸೇರಿ ಪ್ರಾಕ್ಟೀಸ್ ಮಾಡಿದ್ದೇನೆ ಎಂದು ಯಶ್ ಹೇಳಿದ್ದಾರೆ.
80 ದಶಕದಂತೆ ಯಶ್ ಗೆ ಸಾನಿಯಾ ಸರ್ದಾರಿಯಾ ಕಾಸ್ಟ್ಯೂಮ್ ರೆಡಿ ಮಾಡಿದ್ದಾರೆ, ದೊಡ್ಡ ದಾಡಿ ಬಿಟ್ಟಿದ್ದ ಯಶ್ ಪಾತ್ರಗ ಮೈಂಡ್ ಸೆಟ್ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಂಡರಂತೆ.
ಕೆಜಿಎಫ್ ಸಿನಿಮಾ ಆರಂಭವಾಗುತ್ತಿದ್ದಂತೆ ಯಶ್ ನಟಿ ರಾಧಿಕಾ ಪಂಡಿತ್ ಜೊತೆ ಡಿಸೆಂಬರ್ 2016 ರಲ್ಲಿ ವಿವಾಹವಾದರು. ಜೊತೆಗೆ ಇತ್ತೀಚೆಗೆ ಈ ತಾರಾ ದಂಪತಿಗೆ ಹೆಣ್ಣು ಮಗು ಕೂಡ ಜನಿಸಿದೆ ಯಶ್ ಗೆ ಈ ಎರಡು ವರ್ಷದ ಅವಧಿ ಸಿಕ್ಕಾಪಟ್ಟೆ ಬ್ಯುಸಿ ಶೆಡ್ಯೂಲ್ ಆಗಿತ್ತು, ವೈವಾಹಿಕ ಜೀವನ ಹಾಗೂ ಕೆಜಿಎಫ್ ಸಿನಿಮಾ ಬ್ಯಾಲೆನ್ಸ್ ಮಾಡುವುದು ಸವಾಲಾಗಿತ್ತು.
ಮನೆಯವರಿಗೆ ನನ್ನ ಗಡ್ಡ ಇಷ್ಟ ಇರಲಿಲ್ಲ, ಆದಷ್ಟು ಬೇಗ ಸಿನಿಮಾ ಶೂಟಿಂಗ್ ಮುಗಿಸಿ, ಕ್ಲೀನ್ ಶೇವ್ ಮಾಡಿದ ಲುಕ್ ನಲ್ಲಿ ನೋಡಲು ಬಯಸಿದ್ದರು. ಆದರೆ ರಾಕಿ ಪಾತ್ರಕ್ಕೆ ಗಡ್ಡಯದ ಅವಶ್ಯಕತೆ ಕಂಡಿದ್ದ ಅವರೆಲ್ಲಾ ನನ್ನನ್ನು ಹಾಗೆಯೇ ಇರಲು ಬಿಟ್ಟಿದ್ದರು ಎಂದು ಯಶ್ ತಿಳಿಸಿದ್ದರು.
ಕನ್ನಡದಂತೆಯೇ ಇರ ನಾಲ್ಕು ಭಾಷೆಗಳಲ್ಲಿ ಕೆಜಿಎಫ್ ರಿಲೀಸ್ ಆಗುತ್ತಿರುವುದಕ್ಕೆ ಯಶ್ ಖುಷಿ ಯಿಂದಿದ್ದಾರೆ.ಆದರೆ ನಾಲ್ಕು ಭಾಷೆಗಳಲ್ಲೂ ಪಾತ್ರಕ್ಕೆ ಹೊಂದುವಂತ ಧ್ವನಿ ಹುಡುಕಿ ಡಬ್ ಮಾಡುವುದು ತುಂಬಾ ಕಷ್ಟದ ಕೆಲಸ ಆಗಿದೆ ಎಂದು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಬಹಳ ಹಾರ್ಡ್ ವರ್ಕ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಪ್ರಶಾಂತ್ ನೀಲ್, ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ , ಅವರೆಲ್ಲರಿಗೂ ಯಶ್ ಧನ್ಯವಾದ ಅರ್ಪಿಸಿದ್ದಾರೆ.
ವಿಶೇಷವಾಗಿ ನಿರ್ದೇಶಕ ಪ್ರಶಾಂತ್ ಅವರ ತಾಯಿ ಮತ್ತು ಪತ್ನಿ ಅವರಿಗೆ ಯಶ್ ಥ್ಯಾಂಕ್ಸ್ ಹೇಳಿದ್ದಾರೆ, ಅವರ ಅಭಿರುಚಿಗೆ ತಕ್ಕಂತೆ ಕೆಲಸ ಮಾಡಲು ಬಿಟ್ಟಿರುವ ಅವರಿಗೆ ಧನ್ಯವಾದ. ಈ ಪ್ರಾಜೆಕ್ಟ್ ಗಾಗಿ ಅವರು ತುಂಬಾ ಸಮಯವನ್ನು ವ್ಯಯಿಸಿದ್ದಾರೆ.
ಇನ್ನೂ ಕೆಜಿಎಫ್ ಸಿನಿಮಾದಲ್ಲಿ ಯಶ್ ಬಳಸಿದ್ದ 350 ಸಿಸಿ ಬೈಕ್ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಯಶ್ ನಿರ್ಥರಿಸಿದ್ದಾರೆ. ರಾಕಿ ಪಾತ್ರದ ನೆನಪಿಗಾಗಿ ಬೈಕ್ ಇಟ್ಟುಕೊಳ್ಳಲಿದ್ದಾರೆ.
ಕೆಜಿಎಫ್ ವಿಶೇಷಗಳು:
* ಮೊದಲ ಬಾರಿಗೆ ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. (ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ)
* ಯಶ್ ಮತ್ತು ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.
* ‘ಜೋಕೆ ನಾನು ಬಳ್ಳಿಯ ಮಿಂಚು’ ಎಂಬ ಹಾಡನ್ನು ಮರುಬಳಕೆ ಮಾಡಿಕೊಳ್ಳಲಾಗಿದ್ದು, ತಮನ್ನಾ ಭಾಟಿಯಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
* ಎಪ್ಪತ್ತು–ಎಂಬತ್ತರ ದಶಕದಲ್ಲಿ ನಡೆಯುವ ಕಥೆ
* ಸುಮಾರು 60 ಕೋಟಿ ಬಜೆಟ್ ಸಿನಿಮಾ
* ಹಿಂದಿ ಅವತರಣಿಕೆಯ ವಿತರಣೆ ಜವಾಬ್ದಾರಿಯನ್ನು ಖ್ಯಾತ ನಟ ಪರ್ಹಾನ್ ಅಖ್ತರ್, ರಿತೀಶ್ ಸಿದ್ವಾನಿ, ಅನಿಲ್ ತಡಾನಿ ವಹಿಸಿಕೊಂಡಿದ್ದಾರೆ.
ನಮ್ಮ ಸುತ್ತಲಿನ ಜಗತ್ತನ್ನು, ಬದುಕನ್ನು ಎಲ್ಲವನ್ನೂ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೋ ಅಷ್ಟು ಒಳ್ಳೆಯ ನಟನಾಗುತ್ತ ಹೋಗುತ್ತೇನೆ ಎನ್ನುವುದು ನನ್ನ ನಂಬಿಕೆ.
–ನಟ ಯಶ್
ಕೆಜಿಎಫ್ ಮೂಲಕ ನನ್ನ ನಟನಾವೃತ್ತಿಯನ್ನು ಆರಂಭವಾಗುತ್ತಿರುವುದು ನನ್ನ ಅದೃಷ್ಟ ಎಂದೇ ಭಾವಿಸಿದ್ದೇನೆ. ಐದು ಭಾಷೆಗಳ ಪ್ರೇಕ್ಷಕರಿಗೆ ಪರಿಚಿತಳಾಗುತ್ತಿದ್ದೇನೆ. ಇಂಥ ಆರಂಭ ಎಲ್ಲರಿಗೂ ಸಿಗುವುದಿಲ್ಲ. ನಾನು ಒಪ್ಪಿಕೊಳ್ಳುವಾಗ ಇದು ಕನ್ನಡದ ಸಿನಿಮಾ ಮಾತ್ರ ಎಂದೇ ಒಪ್ಪಿಕೊಂಡಿದ್ದು. ನಂತರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಒಳ್ಳೆಯ ಸಿನಿಮಾಗೆ ಭಾಷೆ ಎಂದೂ ಒಂದು ತಡೆಯಾಗಲಾರದು ಎಂಬುದಕ್ಕೆ ’ಕೆಜಿಎಫ್‘ ಒಂದು ನಿದರ್ಶನ.
– ಶ್ರೀನಿಧಿ ಶೆಟ್ಟಿ, ಕೆಜಿಎಫ್ ಚಿತ್ರದ ನಾಯಕಿ
ಕೆಜಿಎಫ್ ಸಿನಿಮಾದಲ್ಲಿ ಇಂದು ಎಲ್ಲರೂ ಬಳಸುವ ತಂತ್ರಜ್ಞಾನವನ್ನೇ ಬಳಸಿಕೊಂಡು ಚಿತ್ರೀಕರಿಸಿದ್ದೇವೆ. ಆದರೆ ಸಾಧ್ಯವಾದಷ್ಟೂ ಸಹಜ ಬೆಳಕನ್ನೇ ಬಳಸಿಕೊಂಡು, ಒಂದೊಂದು ದೃಶ್ಯದ ಕುರಿತೂ ಚರ್ಚಿಸಿ ಚಿತ್ರೀಕರಿಸಿದ್ದೇವೆ. ಆದ್ದರಿಂದ ಆ ಚಿತ್ರದ ದೃಶ್ಯಗಳು ಅಷ್ಟು ಶ್ರೀಮಂತವಾಗಿ ಕಾಣಿಸುತ್ತಿವೆ.
–ಭುವನ್ ಗೌಡ, ಕೆಜಿಎಫ್ ಛಾಯಾಚಿತ್ರಗ್ರಾಹಕ