ಬೆಂಗಳೂರು :
ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡು ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಯವರನ್ನು ಸಿ.ಪಿ.ಯೋಗೀಶ್ವರ್ ಭೇಟಿ ನೀಡಿದ್ದಾರೆ.
ಹೌದು, ಕಾಂಗ್ರೆಸ್ ನಿಂದ ಬಂಡಾಯವೆದ್ದು, ದೋಸ್ತಿ ಸರ್ಕಾರವನ್ನು ಕೆಡವಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯವರನ್ನು ಮಾಜಿ ಸಚಿವ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಭೇಟಿ ಮಾಡಿದ್ದಾರೆ.
ನಿನ್ನೆ ನಗರದ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಿವಾಸಕ್ಕೆ ಆಗಮಿಸಿದ ಯೋಗೇಶ್ವರ್, ಜಾರಕಿಹೊಳಿಯವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಬಿಜೆಪಿಗೆ ಬರುವಂತೆ ಸಿ.ಪಿ. ಯೋಗೇಶ್ವರ್ ಜಾರಕಿಹೊಳಿಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಇನ್ನು ಸಿ.ಪಿ. ಯೋಗೇಶ್ವರ್ ಬೆನ್ನಲ್ಲೇ ನೆಲಮಂಗಲ ಮಾಜಿ ಬಿಜೆಪಿ ಶಾಸಕ ನಾಗರಾಜು ಕೂಡ ರಮೇಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಪಕ್ಷದ ನಾಯಕರ ಜತೆ ಮುನಿಸಿಕೊಂಡು ಬಂಡಾಯ ಸಾರಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಸಿ.ಪಿ ಯೋಗೇಶ್ವರ್ ಮತ್ತು ನಾಗರಾಜ್‌ಗೆ ಬಂಡಾಯ ಶಾಸಕರ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು. ಸದ್ಯ ಬಿಜೆಪಿ ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿಹೊಳಿಯವರ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ