ಮೈಸೂರು :
ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಮರ್ಯಾದಾ ಹತ್ಯೆ ಆಗಿರಬಹುದೆಂಬ ಅನುಮಾನ ಹುಟ್ಟು ಹಾಕಿದೆ.
ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದ ಯುವತಿ ಸವಿತಾ(25) ಮೃತಪಟ್ಟ ಯುವತಿ. ಕೂಗಲೂರು ಗ್ರಾಮದ ಕಾಳನಾಯಕ ಮತ್ತು ನಾಗಮ್ಮ ಎಂಬುವರ ಪುತ್ರಿ. ಕೂಗಲೂರು ಮತ್ತು ಕಸುವಿನಹಳ್ಳಿ ಮುಖ್ಯರಸ್ತೆಯ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ನರ್ಸಿಂಗ್ ತರಬೇತಿ ಮುಗಿಸಿ ಒಂದು ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಸವಿತಾ, ಗುರುವಾರ ಗ್ರಾಮಕ್ಕೆ ಬಂದ ಯುವತಿ ಮನೆಯಿಂದ ಬೈಕ್‍ನಲ್ಲಿ ತೆರಳಿದ್ದ ವೇಳೆ ಲಕ್ಷಣಾಪುರ ಹಾಗೂ ಕೂಗಲೂರು ರಸ್ತೆಯಲ್ಲಿ ಬಾಯಿಯಲ್ಲಿ ವಾಂತಿ ಮಾಡಿಕೊಂಡು ಬಿದ್ದಿರುವುದನ್ನು ನೋಡಿದ ಸಾರ್ವಜನಿಕರು ಅವರ ತಾಯಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅವರು ನಂಜನಗೂಡಿನ ಸಾರ್ವಜನಿಕ ಆಸ್ಪತೆಗೆ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋದಾಗ ಪರೀಕ್ಷೆ ನಡೆಸಿದ ವೈದ್ಯರು, ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಸವಿತಾ ಸಿದ್ದಯ್ಯನಹುಂಡಿ ಗ್ರಾಮದ ಅನ್ಯ ವರ್ಗದ ಶಂಕರ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಇದಕ್ಕೆ ಮನೆಯವರ ವಿರೋಧವಿತ್ತು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಯುವತಿಯ ತಾಯಿ, ತನ್ನ ಸಂಬಂಧಿಗಳೊಂದಿಗೆ ಯುವಕನ ಮನೆಗೆ ಹೋಗಿ ಇಬ್ಬರು ಅನ್ಯ ಜಾತಿಯವರು, ತಮ್ಮ ಮಗಳನ್ನು ಬಿಟ್ಟು ಬೇರೆ ಯುವತಿಯನ್ನು ಮದುವೆಯಾಗುವಂತೆ ಯುವಕನಿಗೆ ಹೇಳಿದ್ದರಂತೆ. ಆದರೆ ಯುವಕ ನಿಮ್ಮ ಮಗಳನ್ನು ಬಿಟ್ಟು ಬೇರೆ ಯುವತಿಯನ್ನು ಮದುವೆಯಾಗುವುದಿಲ್ಲವೆಂದು ಪಟ್ಟು ಹಿಡಿದಿದ್ದನಂತೆ. ಜಾತಿ ಅಡ್ಡ ಬಂದ ಕಾರಣ ಮರ್ಯಾದೆ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನಂಜನಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
