ಮಡಿಕೇರಿ :
ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಬರುವ ಕಾಟಗೇರಿ ಗ್ರಾಮದ ಬಳಿಯಲ್ಲಿ ರಸ್ತೆಯು ಬಿರುಕು ಬಿಟ್ಟಿರುವುದು ಈ ಭಾಗದಲ್ಲಿ ಸಾಗುವ ವಾಹನ ಸವಾರರಿಗೆ ಆತಂಕ ಮೂಡಿಸಿದೆ.
ರಾಷ್ಟ್ರೀಯ ಹೆದ್ದಾರಿ 275ರ ತಾಳತ್ತಮನೆ- ಕಾಟಕೇರಿ ನಡುವೆ ಕೆಲ ದಿನಗಳಿಂದ ಬಿರುಕು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್ ಆಗುವ ಎಲ್ಲಾ ಮುನ್ಸೂಚನೆ ಗೋಚರಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅವೈಜ್ಞಾನಿಕ ಕಾರಣ ಹಾಗೂ ಕಾಮಗಾರಿ ಸರಿಯಾಗಿ ನಡೆದ ದಿಂದ ರಸ್ತೆ ಬಿರುಕು ಬಿಟ್ಟಿದೆ ಎನ್ನಲಾಗಿದೆ.
ಸದ್ಯಕ್ಕೆ ತಾತ್ಕಲಿಕವಾಗಿ ಮಡಿಕೇರಿ ಗ್ರಾಮಾಂತರ ಪೊಲೀಸರು ಮುಂಜಾಗ್ರತ ಕ್ರಮವಾಗಿ ಮರಳು ಮೂಟೆಗಳನ್ನು ಇಟ್ಟಿದ್ದಾರೆ. ಆದರೆ ಇದು ತಾತ್ಕಾಲಿಕವಾಗಿದ್ದು, ಕೂಡಲೇ ಸಿಮೆಂಟ್ ಗೋಡೆಯನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಈ ರಸ್ತೆ ಕೊಡಗು ಜಿಲ್ಲೆಯ ಪಾಲಿಗೆ ಅತಿ ಮುಖ್ಯವಾಗಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಈ ಮಾರ್ಗ ಕೊಡಗು ಜಿಲ್ಲೆಗೆ ಅನಿವಾರ್ಯವೂ ಆಗಿದೆ. ಈ ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಮಾಡಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಮಾರ್ಗದಲ್ಲಿ ಸಾಗುತ್ತಿದ್ದ ವಾಹನಗಳಿಗೆ ಕುಶಾಲನಗರದಿಂದ ಸಕಲೇಶಪುರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಇನ್ನು ಬಿರುಕು ಬಿಟ್ಟಿರುವ ರಸ್ತೆಗೆ ಅಪ್ಪಯ್ಯ ರಂಜನ್, ಹಾಗೂ ಕೆ.ಜಿ ಬೋಪಯ್ಯ ಅವರು ಭೇಟಿ ನೀಡಿದ್ದು, ಕೇವಲ ಮೂರು ತಿಂಗಳ ಹಿಂದೆ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಈ ಸಮಸ್ಯೆ ಇಷ್ಟು ಬೇಗ ಉಂಟಾಗಿರುವುದಕ್ಕೆ ಕಾಮಗಾರಿಯೇ ಕಾರಣ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ