ಚಿತ್ರದುರ್ಗ:
ಸುರೇಶ್ ಗೌಡ ಅವರಿಗೆ ಆಫರ್ ಮಾಡಿದ ದಾಖಲೆ ಇದ್ದರೆ ಮುಖ್ಯಮಂತ್ರಿ ಬಿಡುಗಡೆ ಮಾಡಲಿ. ರಾಜ್ಯದ ಆರೂವರೆ ಕೋಟಿ ಜನರಿಗೆ ಸತ್ಯಾಸತ್ಯತೆ ಏನು ಅಂತ ಗೊತ್ತಾಗುತ್ತೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.
ತಾಲ್ಲೂಕಿನ ಸಿರಿಗೆರೆಯಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುರೇಶ್ ಗೌಡ ಅವರಿಗೆ ಆಮಿಷ ಒಡ್ಡಿರುವ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹಾಗಿದ್ದರೆ ಮೊದಲು ಅದನ್ನು ಬಿಡುಗಡೆ ಮಾಡಲಿ. ಸುಳ್ಳು ಆರೋಪ ಮಾಡುತ್ತಲೇ ದಿನನಿತ್ಯವೂ ಗೊಂದಲ ಸೃಷ್ಟಿಸುತ್ತಿದ್ದಾರೆ. ಇನ್ನುಮುಂದೆ ಅವರ ಬಗ್ಗೆ ಮಾತನಾಡಬಾರದು ಎಂದು ತೀರ್ಮಾನಿಸಿದ್ದೇನೆ ಎಂದರು.
ಮಾಲೀಕಯ್ಯ ಗುತ್ತೇದಾರ್, ಸುಭಾಷ್ ಗುತ್ತೇದಾರ್ ಅವರನ್ನು ಮುಖ್ಯಮಂತ್ರಿ ಕರೆದು ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಅತೃಪ್ತರಿಗೆ ಸಚಿವ ಸ್ಥಾನದ ಆಫರ್ ನೀಡುತ್ತಿರುವುದು ಕುಮಾರಸ್ವಾಮಿಯೇ ಹೊರತು ನಾನಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತಂದುಕೊಡುವ ನಿಟ್ಟಿನಲ್ಲಿ ರಾಜ್ಯದ ಜನರ ಸೇವೆ ಮಾಡಲಿ. ಮಂಡ್ಯದಲ್ಲಿ ನಾಲ್ಕು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲು ಈಗಾಗಲೇ ಅವರು ಘೋಷಿಸಿರುವ ರೈತರ ಸಾಲ ಮನ್ನಾ ಆಗುವಂತೆ ನೋಡಿಕೊಳ್ಳಲಿ. ಉತ್ತಮ ಆಡಳಿತ ನೀಡಲು ಗಮನಹರಿಸಲಿ ಎಂದು ಸಲಹೆ ನೀಡಿದರು.
ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಎಲ್ಲಿ ಹೇಳಿದ್ದೇನೆ? ವಿರೋಧ ಪಕ್ಷದಲ್ಲಿದ್ದು, ರಾಜ್ಯದ ಜನರ ಪರ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ಸಮನ್ವಯ ಸಮತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ