ಬೆಂಗಳೂರು
ವಿಶ್ವವಿಖ್ಯಾತ ದಸರಾ ಉತ್ಸವ ವೀಕ್ಷಣೆಗಾಗಿ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಬೆಂಗಳೂರಿನಿಂದ ಮೈಸೂರಿಗೆ ಈ ತಿಂಗಳ 10ರಿಂದ 19ರ ವರೆಗೆ ವಿಶೇಷ ವಿಮಾನ ಸೇವೆಯನ್ನು ಆರಂಭಿಸಲಿದೆ.
ಈ ಕುರಿತಂತೆ ಏರ್ ಇಂಡಿಯಾದ ಅಂಗಸಂಸ್ಥೆ, ಅಲಯನ್ಸ್ ಏರ್‍ನೊಂದಿಗೆ ನಿಗಮ ಒಪ್ಪಂದಕ್ಕೆ ಸಹಿ ಹಾಕಿದೆ. ದಸರಾ ಸಂದರ್ಭದ ಈ ವಿಶೇಷ ವಿಮಾನ 72 ಅಸನಗಳನ್ನು ಒಳಗೊಂಡಿದ್ದು, ಪ್ರತಿನಿತ್ಯ ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಮಧ್ಯಾಹ್ನ 3.30ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸಲಿದೆ.
ಕಳೆದ ಎರಡು ವರ್ಷಗಳಲ್ಲಿ ದಸರಾ ಉತ್ಸವ ವೀಕ್ಷಣೆಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, 7 ಅಸನಗಳ “ಆಕಾಶ ಅಂಬಾರಿ” ವಿಶೇಷ ವಿಮಾನ ಸೇವೆಯನ್ನು ಪ್ರವಾಸಿಗರಿಗೆ ಒದಗಿಸಿತ್ತು. ಈ ಬಾರಿ ದಸರಾ ಮಹೋತ್ಸವದ ವೇಳೆ ವಿಶಿಷ್ಟ ಕ್ರೀಡೆಯಾದ ಟ್ರಯಥ್ಲಾನ್ ಸ್ಪರ್ಧೆಯನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಈಜು, ಸೈಕ್ಲಿಂಗ್ ಮತ್ತು ಓಟವನ್ನು ಒಳಗೊಂಡ ಈ ಸ್ಪರ್ಧೆಯನ್ನು ಸರಸ್ವತಿಪುರಂ ಬಡಾವಣೆಯಲ್ಲಿ ಸೈಕ್ಲಿಂಗ್ ಮತ್ತು ರನ್ನಿಂಗ್ ನಂತರ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ಸ್ಪರ್ಧಿಗಳು ನಿಗದಿತ ದೂರವನ್ನು ಕ್ರಮಿಸುವ ಮೂಲಕ ಪೂರೈಸುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ