ಬೆಂಗಳೂರು
ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ ಜಾರಿಯಿಂದ ರಾಜ್ಯಗಳ ಅಧಿಕಾರಕ್ಕೆ ಧಕ್ಕೆಯಾಗಿದ್ದು, ಒಕ್ಕೂಟ ವ್ಯವಸ್ಥೆಗೆ ಅಪಚಾರವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿಂದು ಪ್ರತಿಷ್ಠಿತ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಫ್ ಸಂವಾದದಲ್ಲಿ ಮಾತನಾಡಿದ ಅವರು, ಜಿಎಸ್ಟಿ ಕಾಯಿದೆಯಲ್ಲಿ ಹಲವು ಬದಲಾವಣೆಗಳನ್ನು ತರಬೇಕಿದೆ. ಜಿಎಸ್ಟಿ ಜಾರಿಗೊಳಿಸಿದ ನಂತರ ಒಕ್ಕೂಟ ವ್ಯವಸ್ಥೆಯಲ್ಲಿರುವ ಎಲ್ಲಾ ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಕಡಿವಾಣ ಬಿದ್ದಿದೆ. ಒಕ್ಕೂಟ ವ್ಯವಸ್ಥೆಯ ಅಧಿಕಾರ ವ್ಯಾಪ್ತಿಯ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದ್ದರೂ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರವನ್ನು ಸಂವಿಧಾನ ನಿರ್ದಿಷ್ಟವಾಗಿ ನಿಗದಿಪಡಿಸಿದೆ. ಆದರೆ ಜಿಎಸ್ಟಿ ಅನುಷ್ಠಾನದಿಂದ ಒಕ್ಕೂಟ ವ್ಯವಸ್ಥೆಯ ಮೂಲತತ್ವಕ್ಕೆ ಹಾನಿಯಾಗಿದೆ ಎಂದರು.
ರೈತರು ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು, ಹೆಚ್ಚುವರಿ ಬಡ್ಡಿ ಪಾವತಿ ಮಾಡುತ್ತಿರುವುದನ್ನು ಗಮನಿಸಿ, ಋಣಮುಕ್ತ ಕಾನೂನು ಜಾರಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿ, ರಾಷ್ಟ್ರಪತಿ ಅವರ ಅನುಮೋದನೆಗೆ ಕಳುಹಿಸಲಾಗಿದೆ. ಅನುಮತಿ ದೊರೆತ ಕೂಡಲೇ, ಕಾನೂನು ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಯಾವುದೇ ರಾಜ್ಯದಲ್ಲಿ ಅತಿವೃಷ್ಠಿ , ಅನಾವೃಷ್ಠಿ ಇಲ್ಲವೇ ಪ್ರಕೃತಿ ವಿಕೋಪಕ್ಕೆ ತುತ್ತಾದಾಗ ತೆರಿಗೆಗಳನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ಇರಬೇಕು. ಆದರೆ ಏಕರೂಪ ತೆರಿಗೆಯಿಂದ ರಾಜ್ಯಗಳು ತೆರಿಗೆ ವಿಧಿಸುವ ಅಧಿಕಾರವನ್ನು ಕಳೆದುಕೊಂಡಿದೆ ಎಂದರು.
ಕರ್ನಾಟಕ ರಾಜ್ಯ ನದಿ ನೀರಿನ ಹಂಚಿಕೆ ವ್ಯಾಜ್ಯಗಳ ಕುರಿತು ಬೆಳಕು ಚೆಲ್ಲಿದ ಕುಮಾರಸ್ವಾಮಿ, ಗೋವಾ, ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳ ಜತೆ ನೀರು ಹಂಚಿಕೆ ವಿವಾದವಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ಮೂಲಕ ಈ ಎಲ್ಲಾ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗಲು ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು . ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡಣವಿಸ್, ಪಂಜಾಬ್ ಮುಖ್ಯಮಂತ್ರಿ ಅಮರೀಂಧರ್ ಸಿಂಗ್ ಸಂವಾದದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








