ಬೆಂಗಳೂರು:
10 ಆಸ್ಪತ್ರೆಯನ್ನು ಅಲೆದರೂ ಚಿಕಿತ್ಸೆ ಸಿಗದೆ 1 ತಿಂಗಳ ಮಗುವನ್ನು ಕಳೆದುಕೊಂಡ ತಂದೆ, ಸಿಎಂ ಖಾಸಗಿ ನಿವಾಸದ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.
ಬೆಂಗಳೂರಿನ ಮಂಜುನಾಥ ನಗರದ ನಿವಾಸಿ ವೆಂಕಟೇಶ್ ನಾಯ್ಡು ಅವರ 1 ತಿಂಗಳ ಮಗು ತೀವ್ರ ಉಸಿರಾಟದಿಂದ ಬಳಲುತ್ತಿತ್ತು. ಉಸಿರಾಟದ ಸಮಸ್ಯೆಯಿಂದ ಮಗು ಬಳಲುತ್ತಿದ್ದಾಗ 10 ಖಾಸಗಿ ಆಸ್ಪತ್ರೆಗಳಿಗೆ ವೆಂಕಟೇಶ್ ಇಡೀ ರಾತ್ರಿ ಅಲೆದಿದ್ದರು. ಆಂಬ್ಯುಲೆನ್ಸ್ ಇಲ್ಲದೆ ಬೈಕ್‍ನಲ್ಲೇ 200 ಕಿ.ಮೀ ಸುತ್ತಾಡಿದ್ದ ವೆಂಕಟೇಶ್‍ರ ಮಗು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಜು.11ರಂದು ಮೃತಪಟ್ಟಿತ್ತು.
ಈ ಘಟನೆ ಜುಲೈ 16ರಂದು ತಡವಾಗಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಡಿಸಿಎಂ ಹಾಗೂ ಸಚಿವರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸಿಎಂ ಯಡಿಯೂರಪ್ಪ ಮನೆ ಮುಂದೆ ನ್ಯಾಯ ಕೊಡಿಸಿ ಎಂದು ಮೃತ ಮಗುವಿನ ತಂದೆ ಮಗಳ ಫೋಟೋ ಹಿಡಿದು ಕಣ್ಣೀರು ಹಾಕಿತ್ತ ರೋಧಿಸಿದರು.
‘ನನ್ನ ಮುಗುವಿನ ಸಾವಿಗೆ ನ್ಯಾಯ ಬೇಕು. ನನಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ತಡ ಮಾಡಬೇಡಿ, ದಯವಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿ. ಇಲ್ಲದೆ ಹೋದರೆ ನನ್ನ ಹೋರಾಟ ಮುಂದುವರಿಯುತ್ತದೆ, ನನ್ನ ಪ್ರಾಣ ಬೇಕಿದ್ದರೆ ಹೋಗಲಿ ಉಪವಾಸ ಮಾಡುತ್ತೇನೆ’ ಎಂದು ಎಚ್ಚರಿಸಿದರು.
ಪ್ರತಿಭಟನೆಗೆ ಕುಳಿತಿದ್ದ ವೆಂಕಟೇಶ್ ನಾಯ್ಡ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ಧರಣಿಗೆ ಇದು ಸರಿಯಾದ ಸಮಯವಲ್ಲ ಎಂದು ಮನವೊಲಿಸಿದರು. ಬಳಿಕ ಸಿಎಂ ಭೇಟಿ ಮಾಡಿಸುವುದಾಗಿ ಸಿಎಂ ಕಾವೇರಿ ನಿವಾಸದ ಬಳಿಗೆ ಕರೆದೊಯ್ದರು.
ತೀವ್ರ ಉಸಿರಾಟದಿಂದ ಬಳಲುತ್ತಿದ್ದ 1 ತಿಂಗಳ ಹಸುಗೂಸಿನೊಂದಿಗೆ ಹತ್ತಾರು ಆಸ್ಪತ್ರೆಗಳನ್ನು ಅಲೆದರೂ ಚಿಕಿತ್ಸೆ ಸಿಗದೆ ಮೃತಪಟ್ಟ ಒಂದು ತಿಂಗಳ ಮಗುವಿನ ಪೋಷಕರು ಆಸ್ಪತ್ರೆ ಎದುರು ಕಿಡಿಕಾರಿದ್ದಷ್ಟೇ ಅಲ್ಲದೆ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದ ಮುಂದೆ ಧರಣಿ ಕುಳಿತ ಮಗುವಿನ ತಂದೆ ವೆಂಕಟೇಶ್, ತನಗಾದ ಅನ್ಯಾಯ ಬೇರೆ ಯಾರಿಗೂ ಆಗುವುದು ಬೇಡ. ರೋಗಿಗಳಿಗೆ ಚಿಕಿತ್ಸೆ ನೀಡದೇ ಸತಾಯಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ