ಶಾಸಕರಿಗೆ ಮತ್ತೊಮ್ಮೆ ನಿರಾಸೆ ಆಗುವ ಸಾಧ್ಯತೆ!!!!

ಬೆಂಗಳೂರು:

     ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಆಸೆ ಹೊಂದಿದ್ದ ಅತೃಪ್ತ ಶಾಸಕರಿಗೆ ಮತ್ತೊಮ್ಮೆ ನಿರಾಸೆ ಎದುರಾಗುವ ಸಾಧ್ಯತೆಯಿದೆ.

     ಪಿತೃಪಕ್ಷ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲು ಉದ್ದೇಶಿಸಲಾಗಿತ್ತು. ಇದೀಗ ಸದ್ಯದಲ್ಲೇ ರಾಮನಗರ ಮತ್ತು ಜಮುಖಂಡಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಲಿದ್ದು, ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವ ನಿರೀಕ್ಷೆಯಿದೆ.

    ಪಿತೃಪಕ್ಷ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಒಪ್ಪುತ್ತಿಲ್ಲ. ಪಿತೃ ಪಕ್ಷ ಮುಗಿಯುವ ವೇಳೆಗೆ ಚುನಾವಣಾ ಕಾವು ತೀವ್ರಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬೇಡ ಎನ್ನುವುದು ಜೆಡಿಎಸ್‍ನ ವಾದ.

    ಹೀಗಾಗಿ ಉಪಚುನಾವಣೆ ನೆಪವೊಡ್ಡಿ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೇ ಉಪಚುನಾವಣೆ ಮುಗಿಯುವುದರೊಳಗೆ ಬೆಳಗಾವಿ ಅಧಿವೇಶನ ಎದುರಾಗಲಿದೆ. ಅಷ್ಟರೊಳಗಾಗಿ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳಿಸುವುದು ಕಾಂಗ್ರೆಸ್‍ನ ಉದ್ದೇಶಿದೆ.

     ಈ ಮಧ್ಯೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಚಿವ ಸ್ಥಾನದ ಆಕಾಂಕ್ಷಿಗಳ ಜತೆ ಮಾತುಕತೆ ನಡೆಸುತ್ತಿದ್ದು, ಅತೃಪ್ತರನ್ನು ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

     ಬೆಳಗಾವಿ ಅಧಿವೇಶನ ಆರಂಭವಾಗುವ ವೇಳೆಗೆ ಲೋಕಸಭಾ ಚುನಾವಣೆಯ ಕಾವೇರುವ ಸಾಧ್ಯತೆಯೂ ಸಹ ಇದ್ದು, ಈ ಪ್ರಕ್ರಿಯೆ ಮತ್ತೊಮ್ಮೆ ಮುಂದಕ್ಕೆ ಹೋಗಬಾರದು ಎನ್ನುವುದು ಸಿದ್ದರಾಮಯ್ಯ ಅವರ ವಾದವಾಗಿದೆ.

    ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ತಿಂಗಳ ಎರಡನೇ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳು ಕ್ಷೀಣಿಸಿದ್ದು, ಉಪಚುನಾವಣೆ ಮುಗಿದ ನಂತರವೇ ಈ ಪ್ರಕ್ರಿಯೆ ನಡೆಯುವ ಸಂಭವವಿದೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link