ಧಾರ್ಮಿಕ ಕಾರ್ಯಕ್ರಮದಲ್ಲಿ ದೇವೇಗೌಡರ ಹೇಳಿಕೆ

ತುರುವೇಕೆರೆ:

ಜಿಲ್ಲೆಗೆ ಹೇಮಾವತಿ ನೀರು ಹರಿಯಲು ನಾನೇ ಕಾರಣ : ದೇವೆಗೌಡ

     ರಾಜ್ಯವನ್ನು ಉಳಿಸಲು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತಿಳಿಸಿದರು.ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಗುರುವಿನಮಠ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸೋಮೇಶ್ವರ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಆಟಗಳನ್ನು ನಾನು ನೋಡಿದ್ದೇನೆ.

ಆ ಪಕ್ಷಗಳು ರಾಜ್ಯಕ್ಕೆ ನೀಡಿರುವ ಕೊಡುಗೆ, ಯೋಜನೆಗಳ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ. ಮೇಕೆದಾಟು ಯೋಜನೆಯ ಪಾದಯಾತ್ರೆಯಲ್ಲಿ ಯಾರು ಭಾಗವಹಿಸಿದ್ದರು, ಪಾದಯಾತ್ರೆಯ ಉದ್ದೇಶ ಏನು ಎಂಬುದು ಗೊತ್ತಿದೆ. 1983 ರಲ್ಲಿ ನೀರಾವರಿ ಮಂತ್ರಿಯಾಗಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಹೆಚ್ಚು ಜಾರಿ ಮಾಡಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಯಲು ಈ ದೇವೇಗೌಡ ಕಾರಣ ಎಂದರು.

ಇದು ನನ್ನ ಕೊನೆಯ ಹೋರಾಟ :

ಇಂದಿರಗಾಂಧಿಯವರು ಸುಮಾರು 16 ವರ್ಷ ಈ ದೇಶದ ಪ್ರಧಾನಿಯಾದರೂ ಹಿಂದುಳಿದ ವರ್ಗದವರಿಗೆ ರಾಜಕೀಯ ಶಕ್ತಿ ತುಂಬಲಿಲ್ಲ. ನಾನು ಮುಖ್ಯಮಂತ್ರಿಯಾಗಿ ರಾಜಕೀಯದಲ್ಲಿ ಹಿಂದುಳಿದ ವರ್ಗದವರಿಗೆ ಶಕ್ತಿ ತುಂಬಿದ್ದೇನೆ. ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಮೀಸಲಾತಿ ಜೊತೆಗೆ, ಹಿಂದುಳಿದ ವರ್ಗ, ಮಹಿಳೆಯರಿಗೆ ಶೇ. 33 ರಷ್ಟು ರಾಜಕೀಯ ಮೀಸಲಾತಿ ಕೊಟ್ಟಿದ್ದೇನೆ.

ದೇವೇಗೌಡನನ್ನು ಪ್ರಧಾನಿಯಾದ 20 ತಿಂಗಳಿನಲ್ಲಿಯೆ ನಮ್ಮವರೆ ಪಿತೂರಿ ಮಾಡಿ ಕೆಳಗೆ ಇಳಿಸಿದರು. ಆದರೆ ನನಗೆ ಶಕ್ತಿ ತುಂಬಿದವರು ನನ್ನ ಜನರು. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನನ್ನ ಕೊನೆಯ ಹೋರಾಟ ಮಾಡುತ್ತೇನೆ ಎಂದು ದೇವೇಗೌಡರು ತಿಳಿಸಿದರು.

ತಪ್ಪಿಗೆ ಪಶ್ಚತ್ತಾಪ ಪಡುತ್ತಿದ್ದೇನೆ :

ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ಮಾತನಾಡಿ, ದೇವೇಗೌಡರ ಜೊತೆಯಲ್ಲಿ ಇದ್ದವನು ನಾನು, ಸಣ್ಣ ತಪ್ಪಿನಿಂದ ಇಲ್ಲೆ ಇರುವಂತಾಗಿದೆ. ಅವರ ಮಾತು ಕೇಳಿದ್ದರೆ ಇಂದು ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿರುತ್ತದ್ದೆ. ಈ ಕುರಿತು ಪಶ್ಚತ್ತಾಪ ಪಡುತ್ತಿದ್ದೇನೆ. ಕಾಂಗ್ರೆಸ್‍ನಲ್ಲಿರುವ ನಾಯಕರುಗಳು ಜೆಡಿಎಸ್ ಪ್ರಾಡಕ್ಟ್‍ಗಳು, ರಾಜ್ಯದ ರೈತರ ಹಿತಕ್ಕಾಗಿ ತನ್ನ ಜೀವನವನ್ನೆ ಮುಡುಪಾಗಿಟ್ಟವರು ದೇವೇಗೌಡರು ಮಾತ್ರ ಎಂದರು.

ಕಾರ್ಯಕ್ರಮದಲ್ಲಿ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮಿಜಿ ಆಶೀರ್ವಚನ ನೀಡಿದರು. ನಾಗಮಂಗಲ ಶಾಸಕ ಸುರೇಶ್‍ಗೌಡ ಮಾತನಾಡಿದರು. ಎಪಿಎಂಸಿ ಸದಸ್ಯ ವಿಜಿಕುಮಾರ್, ಮುಖಂಡರಾದ ದೊಡ್ಡಘಟ್ಟ ಚಂದ್ರೇಶ್, ಹೆಚ್.ಟಿ.ಕೃಷ್ಣೇಗೌಡರು, ಕಡೇಹಳ್ಳಿ ಸಿದ್ದೇಗೌಡ, ಎ.ಬಿ.ಜಗದೀಶ್, ಗೌರೀಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಅಪಾರ ಭಕ್ತಾಧಿಗಳು ಇದ್ದರು.

ಪ್ರಾದೇಶಿಕ ಪಕ್ಷಗಳ ಶಕ್ತಿ ಕನ್ನಡಿಗರಿಗೆ ತಿಳಿದಿಲ್ಲ, ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರಗಳು ಅವುಗಳ ಮುಂದೆ ಮಂಡಿಯೂರುತ್ತವೆ. ಕರ್ನಾಟಕದಲ್ಲಿ ಮಾತ್ರ ಜನರು ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ಗೆ ಪೂರ್ಣ ಬಹುಮತ ನೀಡುತ್ತಿಲ್ಲ. ಏಕೆ, ಈ ದೇವೇಗೌಡ ಏನು ತಪ್ಪು ಮಾಡಿದ್ದಾನೆ? ಈ ಸಲ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಸಂಚರಿಸಿ ಜನರಿಗೆ ಕೈ ಮುಗಿದು ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತಂದೇ ತರುತ್ತೇನೆ.

-ದೇವೆಗೌಡ, ಮಾಜಿ ಪ್ರಧಾನಿಗಳು

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap