ಬೆಂಗಳೂರು
ಕೊರೊನಾ ವೈರಸ್ ಹೆಸರು ಕೇಳಿದರೆ ಈಗಲೂ ಜನ ಆತಂಕಕ್ಕೊಳಗಾಗುತ್ತಾರೆ. ಅಷ್ಟರ ಮಟ್ಟಿಗೆ ಜನರ ಜೀವನದ ಮೇಲೆ ಪರಿಣಾಮ ಬೀರಿದ್ದ ಕೋವಿಡ್ ಪರಿಣಾಮ ಈಗಲೂ ಯುವ ಸಮೂಹದ ಮೇಲೆ ಕಂಡುಬರುತ್ತಿದೆ. ಯುವ ಜನರಲ್ಲಿ ಮೊಣಕಾಲು ಸೆಳೆತ, ಸ್ಪೈನ್ ಸವೆಯುವುದಕ್ಕೆ ಕೋವಿಡ್ ಕೂಡ ಪರೋಕ್ಷ ಕಾರಣವಾಗಿದೆ. ಕೊರೊನಾ ಸಮಯದಲ್ಲಿ ಚಿಕಿತ್ಸೆಗಾಗಿ ತೆಗೆದುಕೊಂಡ ಅತಿಯಾದ ಸ್ಟೀರಾಯ್ಡ್ನಿಂದ ಯುವಕರಲ್ಲಿ ಕೂಡ ಇದೀಗ ಸೊಂಟ ನೋವು, ಮಂಡಿ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಬಹಿರಂಗವಾಗಿದೆ.
ಕೋವಿಡ್ ಸೋಂಕಿನ ಸಂದರ್ಭದಲ್ಲಿ ಜೀವ ಉಳಿಸಲು, ವೈರಸ್ ವಿರುದ್ಧ ಹೋರಾಡಲು ಅತಿಯಾದ ಪ್ರಮಾಣದಲ್ಲಿ ಸ್ಟೀರಾಯ್ಡ್ ಬಳಕೆ ಮಾಡಲಾಗಿತ್ತು. ಇದೇ ಅದುವೇ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಕಳೆದ ಕೆಲವು ದಿನಗಳಿಂದ ಯುವಕರಲ್ಲಿ ಹಾಗೂ ವಯೋವೃದ್ಧರಲ್ಲಿ ಮೊಣಕಾಲು ನೋವು ಸೇರಿದಂತೆ ಕಾಲು ನೋವು, ಸೊಂಟ ನೋವು, ಬೆನ್ನು ನೋವು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಕೊವಿಡ್ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಯುವಕರಲ್ಲಿಯೂ ಮೊಣಕಾಲು, ಸೊಂಟ ನೋವು ಹೆಚ್ಚಾಗುತ್ತಿದೆ. ಅತಿಯಾದ ಸ್ಟೀರಾಯ್ಡ್ ಬಳಕೆಯೇ ಇದಕ್ಕೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ಕೊವಿಡ್ ಸಮಯದಲ್ಲಿ ಜೀವ ಉಳಿಸಲು ಸಹಾಯ ಮಾಡಿದ್ದ ಸ್ಟೀರಾಯ್ಡ್ ಈಗ ಜನರ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತಿದೆ. ಅತಿಯಾದ ಸ್ಟೀರಾಯ್ಡ್ ಬಳಕೆಯಿಂದಾಗಿ ಕಾಲು, ಸೊಂಟ ಹಾಗೂ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಯುವಕರು ಕಾಲು, ಸೊಂಟ, ಬೆನ್ನು ನೋವುಗಳ ನಿರ್ಲಕ್ಷ್ಯ ಮಾಡದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ವಯಸ್ಸಾದವರಲ್ಲಾದರೆ ಮಂಡಿ ನೋವು, ಸೊಂಟ ನೋವು ಸಾಮಾನ್ಯ. ಆದರೆ ಈಗ 25ರ ಯುವಕ, ಯುವತಿಯರು ಕೂಡ ಸೊಂಟ ನೋವು, ಮಂಡಿ ನೋವು ಎಂದು ಆಸ್ಪತ್ರೆ ಮೆಟ್ಟಿಲೇರುತ್ತಿದ್ದಾರೆ. ವೈದ್ಯರು ಇದರ ಕಾರಣ ಹುಡುಕಿ ಹೊರಟಾಗ ಅತಿಯಾದ ಸ್ಟೀರಾಯ್ಡ್ ಕಾರಣ ಎಂಬುದು ಪತ್ತೆಯಾಗಿದೆ. ಅತಿಯಾದ ಸ್ಟೀರಾಯ್ಡ್ ಸೇವನೆ ಯುವಕರಲ್ಲಿ ಕಾರ್ಟಿಲೇಜ್ ನಷ್ಟಕ್ಕೆ ಕಾರಣವಾಗ್ತಿದೆ. ಅಲ್ಲದೇ ಸಂಧಿವಾತಕ್ಕೆ ಎಡೆ ಮಾಡಿಕೊಡ್ತಿದೆ.
ದೇಹದ ಮೂಳೆ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ದುರ್ಬಲಗೊಳಿಸಿದೆ. ಸ್ಟೀರಾಯ್ಡ್ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡ ಕಾರಣ ದೇಹದ ಮೂಳೆ ಬಲ ಕುಸಿದಿದೆ. ಇದರಿಂದ ಸೊಂಟ, ಮಂಡಿ ನೋವುಗಳು ಕಾಣಿಸಿಕೊಳ್ತಿದೆ. ವಿಕ್ಟೋರಿಯಾ ಆಸ್ಪತ್ರೆಯ ಆರ್ಥೋಪೆಡಿಕ್ ವಿಭಾಗಕ್ಕೆ ವೃದ್ಧರಷ್ಟೇ ಸಂಖ್ಯೆಯಲ್ಲಿ ಸದ್ಯ ಯುವ ಸಮೂಹ ಕೂಡ ಚಿಕಿತ್ಸೆಗಾಗಿ ಬರುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಬಗ್ಗೆ ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಡಾ. ರಮೇಶ್ ಕೃಷ್ಣ ಕೂಡ ಮಾಹಿತಿ ನೀಡಿದ್ದಾರೆ. ಅತಿಯಾದ ಸ್ಟೀರಾಯ್ಡ್ ಬಳಕೆಯ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡಿರುವ ಅವರು, ಎಚ್ಚರ ಅಗತ್ಯ ಎಂದಿದ್ದಾರೆ.
ಕುಳಿತುಕೊಳ್ಳಲು ಕಷ್ಟ ಆಗುವುದು, ಮೆಟ್ಟಿಲು ಇಳಿಯಲು ಕಷ್ಟಪಡುವುದು, ನಡೆಯುವಾಗ ವಿಪರೀತ ನೋವು ಇತ್ಯಾದಿಗಳನ್ನು ನಿರ್ಲಕ್ಷ್ಯ ಮಾಡಬಾರದು. ಮೊದಲ ಹಂತದಲ್ಲಿ ಔಷಧಿ ಮೂಲಕ ನೋವು ಶಮನ ಮಾಡಬಹುದು. ನಿರ್ಲಕ್ಷ್ಯ ಮಾಡಿದರೆ ನಂತರ ಹಿಪ್ ರೀಪ್ಲೇಸ್ಮೆಂಟ್, ಅಥವಾ ಮಂಡಿಚಿಪ್ಪು ರಿಪ್ಲೇಸ್ಮೆಂಟ್ ಸರ್ಜರಿಗೆ ಒಳಪಡಬೇಕಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.