ತುಮಕೂರು:
ಮೂರು ದಿನದ ಹಿಂದೆಯಷ್ಟೇ ಕೊರಟಗೆರೆ ತಾಲ್ಲೂಕಿನ ಜಟ್ಟಿ ಅಗ್ರಹಾರದ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಐದು ಜನರು ದಾರುಣವಾಗಿ ಸಾವನ್ನಪ್ಪಿದ್ದು, ಇಪ್ಪತ್ತು ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಭಾನುವಾರ ಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ಮೂವರು ಬಲಿಯಾದ ಘಟನೆ ಊರುಕೆರೆ ಬಳಿ ನಡೆದಿದೆ.
ತುಮಕೂರು ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಊರುಕೆರೆ ಬಳಿ ಲಾರಿ ಮತ್ತು ಖಾಸಗಿ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಮೂರು ಜನರು ಮೃತಪಟ್ಟು ಎಂಟು ಜನರಿಗೆ ಸ್ಥಿತಿ ಗಂಭೀರವಾಗಿದ್ದು ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದ ಏಷ್ಯನ್ ಟೂರ್ ಟ್ರಾವೆಲ್ಸ್ ಬಸ್ಸಿನಲ್ಲಿ ಸುಮಾರು ಮೂವತ್ತೆಂಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕರಿಬ್ಬರು ಸೇರಿ ಹನ್ನೆರಡು ಚಕ್ರದ ಐಷಾರಾಮಿ ವಾಹನ ಇದಾಗಿದ್ದು ರಾಷ್ಟಿçÃಯ ಹೆದ್ದಾರಿ 48ರಲ್ಲಿ ಊರುಕೆರೆ ಬಳಿ ಅತಿವೇಗವಾಗಿ ಬಂದ ಬಸ್ಸು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿAದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ .
ಹಿಂದಿನಿಂದ ಬಸ್ಸು ಲಾರಿಗೆ ಗುದ್ದಿದ ಪರಿಣಾಮ ಲಾರಿ ರಸ್ತೆಯಲ್ಲಿ ಅಡ್ಡಲಾಗಿ ಮಗುಚಿ ಬಿದ್ದಿದೆ ಲಾರಿಯಲ್ಲಿ ತುಂಬಿದ್ದ ಸೋಪು ಬಾಕ್ಸ್ಗಳು ಹಾಗೂ ಇತರೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಕಂಡು ಬಂದಿದೆ.
ಓವರ್ ಟೇಕ್ ಮಾಡಿದ್ದೇ ಕಾರಣ
ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರರ ಟೆಕ್ ಮಾಡಲು ಹೋದ ಖಾಸಗಿ ಟೂರ್ ಟ್ರಾವೆಲ್ಸ್ ಬಸ್‌ನ ಚಾಲಕ ಅತಿ ವೇಗವಾಗಿ ಬಂದ ಪರಿಣಾಮ ಮುಂದೆ ಹೋಗುತ್ತಿದ್ದ ಲಾರಿ ಬಲಭಾಗಕ್ಕೆ ತಿರುಗಿಸಿದ್ದ ಸಂದರ್ಭದಲ್ಲಿ ಬಸ್‌ನ ಚಾಲಕನಿಗೆ ನಿಯಂತ್ರಣ ಮಾಡಲು ಸಾಧ್ಯವಾಗದೆ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂಬುದಾಗಿ ಪೊಲೀಸರು ತನಿಖೆ ವೇಳೆ ಅಭಿಪ್ರಾಯಪಟ್ಟಿದ್ದಾರೆ
ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವು
ಬೆಳಗಾವಿ ಮೂಲದ ಏಷಿಯನ್ ಬಸ್ ಟ್ರಾವೆಲ್ಸ್ನ ಚಾಲಕನಾಗಿದ್ದ ಪಾಷಾ ಫಿರ್ (45) ಹಾಗೂ ಬಸ್ಸಿನ ಕ್ಯಾಬಿನ್ ಹಿಂಭಾಗ ಕುಳಿತಿದ್ದ ಇಬ್ಬರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದಾರೆ .ಬಸ್ಸಿನ ಚಾಲಕನ ಪಕ್ಕದ ಕ್ಯಾಬಿನ್‌ನಲ್ಲಿಯೇ ಮಲಗಿದ್ದ ಮತ್ತೊಬ್ಬ ಚಾಲಕ ರಕಾ ಉಲ್ಲಾ ಖಾನ್(42) ಗಂಭೀರವಾಗಿ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಈ ಇಬ್ಬರು ಚಾಲಕರು ತುಮಕೂರು ಜಿಲ್ಲೆಯ ಕುಣಿಗಲ್ ಗ್ರಾಮದವರಾಗಿದ್ದಾರೆ.
ಸ್ಥಳದಲ್ಲಿಯೇ ಒಟ್ಟು ಮೂರು ಜನ ಮೃತಪಟ್ಟರೆ ಮೃತರ ಶವಗಳನ್ನು ಹೊರತೆಗೆಯಲು ಪೋಲೀಸರು ಹಾಗೂ ಸಾರ್ವಜನಿಕರು ಹರಸಾಹಸ ಪಡಬೇಕಾಯಿತು .ಅಗ್ನಿಶಾಮಕ ದಳದ ಸಿಬ್ಬಂದಿ ಅವರ ಸಹಾಯದೊಂದಿಗೆ ಶವಗಳನ್ನು ಹೊರತೆಗೆಯ ಲಾಯಿತಾದರೂ ಮೃತರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
8 ಜನರ ಸ್ಥಿತಿ ಗಂಭೀರ
ಅಪಘಾತದ ರಭಸಕ್ಕೆ ಬಸ್ಸಿನಲ್ಲಿದ್ದ ಸುಮಾರು ಮೂವತ್ತು ಆರು ಜನ ಪ್ರಯಾಣಿಕರಲ್ಲಿ ಎಂಟು ಜನರ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಹಲವರಿಗೆ ಹೆಚ್ಚಿನ ಗಾಯಗಳಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ಗಾಯಾಳುಗಳನ್ನು ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಮುಗಿಲು ಮುಟ್ಟಿದ್ದ ಗಾಯಾಳುಗಳ ರೋಧನೆ
ಅಪಘಾತದ ಸ್ಥಳದಲ್ಲಿ ಗಾಯಾಳುಗಳ ದುಃಖ ಕಿರುಚಾಟ ಮುಗಿಲು ಮುಟ್ಟಿತ್ತು. ಕೈ ಕಾಲುಗಳನ್ನು ಕಳೆದುಕೊಂಡವರು, ಎಂಟಕ್ಕೂ ಹೆಚ್ಚು ಮಂದಿ ಸೊಂಟ ಮುರಿದುಕೊಂಡಿದ್ದರು. ಅವರ ರೋಧನೆ ಮುಗಿಲು ಮುಟ್ಟಿತ್ತು. ಅವರ ರೋಧನೆಯ ದೃಶ್ಯ ನೋಡುಗರ ಕರುಳ ಕಿವುಚಿದಂತಿತ್ತು.
13 ಮಂದಿ ಜಿಲ್ಲಾಸ್ಪತ್ರೆಗೆ ದಾಖಲು
ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ರಾಮಕೃಷ್ಣಯ್ಯ ಹಾಗೂ ಸಿಬ್ಬಂದಿಗಳು ಅಪಘಾತದಲ್ಲಿ ಬಸ್ಸಿನೊಳಗೆ ಸಿಲುಕಿದವರಲ್ಲಿ ಹದಿಮೂರಕ್ಕೂ ಹೆಚ್ಚು ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಲ್ಲದೇ ಗಂಭೀರವಾಗಿ ಗಾಯಗೊಂಡಿದ್ದ ಎಂಟಕ್ಕೂ ಹೆಚ್ಚು ಮಂದಿಯನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಉಳಿದ ಗಾಯಾಳುಗಳನ್ನು ಟಿಎಚ್‌ಎಸ್ ಆಸ್ಪತ್ರೆ, ಸಿದ್ಧಗಂಗಾ ಆಸ್ಪತ್ರೆ .ವಿನಾಯಕ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೋಟೇಶ್ವರ ರಾವ್ ಬೆಂಗಳೂರು, ಕೀರ್ತಿ ಹೈದರಾಬಾದ್, ಅಶ್ವಿನಿ ಕುಮಾರ್ ಬೆಂಗಳೂರು, ರೂ ಬಾಲ್ ಹೈದರಾಬಾದ್, ಇಮಾಮ್ ಹುಸೇನ್ ಕಾವಟಗಿರಿ ಬೈಲಹೊಂಗಲ, ಸಿದ್ದಲಿಂಗು ಬೆಂಗಳೂರು, ಹುಸೇನ್ ತಾವ ಗಿರಿ ಬೈಲಹೊಂಗಲ ,ಅನಿತಾ ಬೆಂಗಳೂರು , ಉಪೇಂದ್ರ ಕುಮಾರ್ ಕಾಮಾಕ್ಷಿಪಾಳ್ಯ, ರಾಜೇಶ್ ಬೆಂಗಳೂರು, ಅರವಿಂದ ಬೆಳಗಾವಿ ,ಕೃಷ್ಣ ಕೃಷ್ಣಗಿರಿ , ಜೈಶಂಕರ್ ತಮಿಳುನಾಡು ಸೇರಿದಂತೆ ಇತರರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಮಗುಚಿ ಬಿದ್ದ ಲಾರಿಯ ಚಾಲಕ ಮತ್ತು ಕ್ಲೀನರ್ ಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆವರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಹೆದ್ದಾರಿ 48 ರಸ್ತೆ ಊರುಕೆರೆ ಮುಂಭಾಗವಿರುವ ರಂಗಾಪುರ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು ಪ್ರಕರಣವನ್ನು ದಾಖಲಿಸಿಕೊಂಡ ತುಮಕೂರು ಗ್ರಾಮಾಂತರ ಪೋಲೀಸ್ರು ಮುಂದಿನ ತನಿಖೆ ಕೈಗೊಂಡಿದ್ದಾರೆ
ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ ಕೋನಾ ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಡಿವೈಎಸ್ಪಿ ತಿಪ್ಪೇಸ್ವಾಮಿ ಹಾಗೂ ಇಲ್ಲಿನ ವೃತ್ತ ನಿರೀಕ್ಷಕ ರಾಮಕೃಷ್ಣ ಇವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ