ಕಾರವಾರ
ಕೈಯಲ್ಲಿ ಸಿಗರೇಟು, ಮದ್ಯದ ಬಾಟಲ್ ಹಿಡಿದು ದೇವರ ದರ್ಶನಕ್ಕೆ ನಿಂತಿರುವ ಭಕ್ತರು! ಇನ್ನೊಂದೆಡೆ, ಕೋಳಿ ಬಲಿಗಾಗಿ ಅರ್ಘ್ಯ ನೀಡುತ್ತಿರುವ ಅರ್ಚಕರು. ಇಂಥದ್ದೊಂದು ವಿಚಿತ್ರ, ಆದರೂ ನಂಬಲೇಬೇಕಾದ ವಿಶೇಷ ಇರುವುದು ಉತ್ತರ ಕನ್ನಡ ಜಿಲ್ಲೆಯ ಕಾರವಾರ – ಗೋವಾ ಗಡಿಯಲ್ಲಿ. ಇಲ್ಲಿರುವ ದೈವದ ಹೆಸರೇ ‘ಖಾಪ್ರಿ ದೇವ’ . ‘ಮದ್ಯ ಪ್ರಿಯ ದೇವ’ ಎಂದೇ ಪ್ರಸಿದ್ಧವಾಗಿರುವ ಈತ ಸರ್ವ ಜನಾಂಗದ ಆರಾಧ್ಯ ದೈವ. ಈ ದೇವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದ್ದು ಬ್ರಿಟಿಷರ ಕಾಲದಲ್ಲಿ ಗುಲಾಮನಾಗಿ ಬಂದ ಖಾಪ್ರಿ ಎಂಬ ವಿದೇಶಿ ಪ್ರಜೆ ಕಾರವಾರದ ಕಾಳಿ ನದಿ ಸಂಗಮದಲ್ಲಿ ನೆಲೆ ನಿಂತು ದೈವತ್ವಕ್ಕೇರಿದ್ದಾನೆ ಎಂಬ ಪ್ರತೀತಿ ಇದೆ.
ಮೂಲತಹಾ ಕ್ರಿಶ್ಚಿಯನ್ ಆಗಿದ್ದರೂ ಎಲ್ಲಾ ಧರ್ಮಗಳ ಆಶಯವನ್ನು ಖಾಪ್ರಿ ಮೈಗೂಡಿಸಿಕೊಂಡಿದ್ದನಂತೆ. ಕಾಳಿ ನದಿ ಸಂಗಮದಲ್ಲಿ ಈತ ಬಡವರಿಗೆ ಸಹಾಯ ಮಾಡುತ್ತಾ, ಯೋಗ-ಧ್ಯಾನವನ್ನು ಮಾಡುತ್ತಾ ಇದ್ದನಂತೆ. ಇದಲ್ಲದೇ, ಈತ ಮದ್ಯಕುಡಿಯುವುದರ ಜೊತೆ ಸಿಗರೇಟು ಸಹ ಸೇದುತಿದ್ದ ಎಂಬ ಪ್ರತೀತಿ ಇದೆ. ಇಷ್ಟಾರ್ಥ ನೆರವೇರಿಸುವ ಈತನನ್ನು ಕಂಡು ಆಶಿರ್ವಾದ ಬೇಡುವ ಜನ ಮದ್ಯ, ಸಿಗರೇಟು ನೀಡುತಿದ್ದರು. ಒಂದು ದಿನ ಈತ ಮೃತಪಟ್ಟಿದ್ದು, ನಂತರ ಇದೇ ಭಾಗದ ಓರ್ವನ ಕನಸಿನಲ್ಲಿ ಬಂದು ತನಗೊಂದು ಆಲಯ ಕಟ್ಟಬೇಕು. ಅಲ್ಲಿ ನಾನು ನೆಲಸುತ್ತೇನೆ ಎಂದಿದ್ದನಂತೆ. ಹೀಗಾಗಿ ಆತ ಇದ್ದ ಕಾಳಿ ಸಂಗಮದಲ್ಲೇ ಆಲಯ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
