ಹುಳಿಯಾರು
ಸ್ತ್ರೀ ತಾಯಿಯಾಗಿ, ಮಗಳಾಗಿ, ಸೊಸೆಯಾಗಿ ಕುಟುಂಬವನ್ನು ನಿರ್ವಹಿಸುವ ದೇವತೆಯಾಗಿದ್ದು ಮಹಿಳೆಯರಿಗೆ ಪ್ರತಿಯೊಬ್ಬರು ಗೌರವವನ್ನು ನೀಡಬೇಕೆಂದು ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನ ನೀಡಲಾಗಿದೆ. ಜೀವನದಲ್ಲಿ ಬರುವಂತಹ ಕಷ್ಟಗಳನ್ನು ನಿಭಾಯಿಸಿಕೊಂಡು ತಾಳ್ಮೆ, ಸಹನೆಯಿಂದ ಹೋಗುವಂತ ಗುಣಗಳು ಮಹಿಳೆಯರಲ್ಲಿದೆ. ಆದುದರಿಂದಲೇ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹಾ ಮಹಿಳೆ ಮುಂದಿದ್ದಾರೆಂದರು.
ಸ್ತ್ರೀ ಶಕ್ತಿ ಯೋಜನೆಯಿಂದ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಜೊತೆಗೆ ಸಂಘಟಿತರಾಗುವಂತೆ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಓರ್ವ ಮಹಿಳೆಗೆ ಮಾಸಿಕ 2 ಸಾವಿರ ರೂ. ನೀಡಲಿದೆ. ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆರನ್ನು ಸನ್ಮಾನಿಸಲಾಯಿತು. ಈ ವೇಳೆ ಮಹಿಳಾ ಮುಖಂಡರಾದ ಕವಿತಾ ಕಿರಣ್‌ಕುಮಾರ್, ಪಪಂ ಸದಸ್ಯ ಸಿದ್ದಿಕ್, ಜುಬೇರ್, ಜಿಪಂ ಮಾಜಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಮುಖಂಡರಾದ ಪಿ.ಟಿ.ಚಿಕ್ಕಣ್ಣ, ಜಗದೀಶ್, ತಾಪಂ ಮಾಜಿ ಅಧ್ಯಕ್ಷೆ ರಮಾದೇವಿ, ಜಿಲ್ಲಾ ಖಾದಿ ನಿಗಮದ ಮಾಜಿ ಅಧ್ಯಕ್ಷ ಸೈಯದ್ ಜಬೀವುಲ್ಲಾ, ಮುಖಂಡರಾದ ರಾಮಣ್ಣ, ನರಸಿಂಹಮೂರ್ತಿ, ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








