ಸಿಎಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ಹೆಗಡೆ ವಿರುದ್ಧ FIRಗೆ ತಡೆ ….!

ಬೆಂಗಳೂರು:

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ವಿರುದ್ಧ ಮುಂಡಗೋಡು ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

   ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅನಂತ ಕುಮಾರ ಹೆಗಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

   ಅರ್ಜಿದಾರರ ಪರ ವಕೀಲ ಎಚ್‌ ಪವನಚಂದ್ರ ಶೆಟ್ಟಿ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ಮುಂಡಗೋಡು ಠಾಣಾ ಪೊಲೀಸರು ಮತ್ತು ದೂರುದಾರ ಕಾನ್‌ಸ್ಟೆಬಲ್‌ ಗಣಪತಿ ಬಸವಂತಪ್ಪ ಹುನ್ನಳ್ಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

    ಮುಂಡಗೋಡು ತಾಲ್ಲೂಕಿನ ಪಾಳಾ ಮತ್ತು ಇಂದೂರ ಗ್ರಾಮದಲ್ಲಿ 2024ರ ಫೆಬ್ರವರಿ 23ರಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆದಿತ್ತು. ಇದರಲ್ಲಿ ಭಾಗವಹಿಸಿದ್ದ ಅನಂತ ಕುಮಾರ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ “ಸಿದ್ರಾಮುಲ್ಲಾ ಖಾನ್‌ ಅತ್ಯಂತ ಹೇಸಿಗೆ ಬರುವ ರೀತಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವಲ್ಲಿ ನಿರತರಾಗಿದ್ದಾರೆ. ಇಂತಹ ಸರ್ಕಾರವನ್ನು ನಾವೆಲ್ಲೂ ನೋಡಿಲ್ಲ. ಇವರ ಕೈಯಲ್ಲಿ ಅಧಿಕಾರ ಕೊಟ್ಟರೆ ನಮ್ಮನ್ನು ಮಾರಾಟ ಮಾಡುತ್ತಾರೆ. ಹಿಂದೂಗಳ ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು, ಚರ್ಚ್‌, ಮಸೀದಿಗೆ ಕೊಡುತ್ತಾರೆ. ಹಿಂದೂಗಳ ದೇವಸ್ಥಾನದಲ್ಲಿ ದೇವರಿಲ್ಲವೇ?” ಎಂದು ‍ಪ್ರಶ್ನಿಸಿದ್ದರು.

    ಅನಂತ ಕುಮಾರ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಆ ಮೂಲಕ ಸಭೆಯಲ್ಲಿ ಹಾಜರಿದ್ದ ಯುವಕರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಶಾಂತಿ-ಸೌರ್ಹದತೆ ಕದಡುವ, ಜಾತಿ, ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪ್ರಧಾನ ಜಿಲ್ಲಾ (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

Recent Articles

spot_img

Related Stories

Share via
Copy link