ನಕಲಿ ವೈದ್ಯರ ಹಾವಳಿ : ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಡಾ. ಶರಣಪ್ರಕಾಶ ಪಾಟೀಲ್‌

ಬೆಂಗಳೂರು

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ , ಕೌಶಲ್ಯಾಭಿವೃದ್ಧಿ ಹಾಗು ಜೀವನೋಪಾಯ ಸಚಿವ ಡಾ ಶರಣ ಪ್ರಕಾಶ ಪಾಟೀಲ್‌ ತಿಳಿಸಿದ್ದಾರೆ.

   ಬುಧವಾರ ಕರ್ನಾಟಕ ಖಾಸಗಿ ಹೋಮಿಯೋಪಥಿಕ್‌ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಸಂಘದ ವತಿಯಿಂದ ಡಾ.ಬಿಆರ್‌.ಅಂಬೇಡ್ಕರ್‌ ಭವನದಲ್ಲಿ ಹಮಿಕೊಂಡಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಹಾವಳಿ ವ್ಯಾಪಕವಾಗಿ ಕೇಳಿಬರುತ್ತಿದೆ. ಯಾವುದೇ ವೈದ್ಯಕೀಯ ಕೋರ್ಸ್‌ ಮುಗಿಸದೆ ಇರುವವರು ಎಲ್ಲೆಂದರಲ್ಲಿ ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುತ್ತಾರೆ. ಇದರ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ ಎಂದು ಹೇಳಿದರು.

   ಗ್ರಾಮೀಣ ಭಾಗದ ಜನರ ಅಮಾಯಕತೆಯನ್ನು ಕೆಲವರು ದುರುಪಯೋಗಪಡಿಸಿಕೊಂಡು ನಕಲಿ ಚಿಕಿತ್ಸೆ ನೀಡುತ್ತಾರೆ. ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಕೆಲವರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಮುಂದೆ ಇದಕ್ಕೆ ಶಾಶ್ವತವಾದ ಕಡಿವಾಣ ಬೀಳಲಿದೆ ಎಂದರು. ಕೇವಲ ಸರ್ಕಾರದಿಂದ ಮಾತ್ರ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಇದಕ್ಕೆ ಹೋಮಿಯೋಪಥಿಕ್‌ ವೈದ್ಯಕೀಯ ಮಹಾ ವಿದ್ಯಾಲಯಗಳ ಸಂಘದ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂದು ಪಾಟೀಲ್ ಹೇಳಿದರು. ಹೋಮಿಯೋಪತಿ ವೈದ್ಯರು ನಮ್ಮ ಜೊತೆ ಕೈ ಜೋಡಿಸಿದರೆ ಇಂಥ ದಂಧೆಯನ್ನು ತಡೆಗಟ್ಟಬಹುದು. ಕೆಲವು ಸಂದರ್ಭಗಳಲ್ಲಿ ನಕಲಿ ವೈದ್ಯರುಗಳಿಂದ ಅಮಾಯಕರ ಪ್ರಾಣಕ್ಕೂ ಕುತ್ತು ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

   ಹೋಮಿಯೋಪತಿ ಹಾಗು ಅಲೋಪತಿ ಬ್ರಿಜ್ ಕೋರ್ಸ್ ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಇದೇ ಸಂದರ್ಭದಲ್ಲಿ ಸಚಿವರಿಗೆ ಸಂಘದ ವತಿಯಿಂದ ಮನವಿ ಮಾಡಲಾಯಿತು. ಇದಕ್ಕೆ ಸಚಿವರು ಈ ಸಮಸ್ಯೆ ಇತ್ಯರ್ಥವಾಗಬೇಕಾದರೆ ಹೋಮಿಯೋಪತಿ ವೈದ್ಯರ ಸಂಘದವರು ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗು ಕೇಂದ್ರ ಸರ್ಕಾರ ಸರ್ಕಾರಕ್ಕೆ ಮನವಿ ಕೊಡಬೇಕು ಎಂದು ಸಲಹೆ ಮಾಡಿದರು. ಅಂತಿಮವಾಗಿ ಇದನ್ನು ಕೇಂದ್ರವೇ ನಿರ್ಧರಿಸಬೇಕಾಗಿರುವುದರಿಂದ ರಾಜ್ಯ ಸರ್ಕಾರದ ಪಾತ್ರ ಇದರಲ್ಲಿ ಏನೂ ಇಲ್ಲ ಎಂದು ಪಾಟೀಲ್ ಪುನರುಚ್ಚರಿಸಿದರು.

    ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಹೋಮಿಯೋಪತಿಯ ಪ್ರತಿನಿಧಿಯೊಬ್ಬರನ್ನು ಸಿಂಡಿಕೇಟ್ ಸದಸ್ಯನಾಗಿ ನೇಮಿಸಬೇಕೆಂದು ಸಂಘದ ಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೂ ಸಕಾರಾತವಾಗಿ ಸ್ಪಂದಿಸಿದ ಶರಣಪ್ರಕಾಶ್‌ ಪಾಟೀಲ್‌ ಅವರು ಈ ಕುರಿತು ವಿಶ್ವವಿದ್ಯಾನಿಲಯದ ಕುಲಪತಿಗಳ ಜೊತೆ ಮಾತುಕತೆ ನಡೆಸುವ ಆಶ್ವಾಸನೆಯನ್ನು ನೀಡಿದರು.

    ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌, ಹೋಮಿಯೋಪಥಿಕ್‌ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಸಂಘದ ಪ್ರಮುಖರಾದ ವಿನೋದ್‌ ದೊಡ್ಡಣ್ಣನವರ್‌, ಕೆ.ಚಂದ್ರಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap