ಮತದಾನ ದಿನದ 72 ಗಂಟೆಗಳ ಮುಂಚಿನ ಅವಧಿಯಲ್ಲಿ ತೀವ್ರ ನಿಗಾ-ಜಿಲ್ಲಾಧಿಕಾರಿ

ತುಮಕೂರು

       ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ದಿನದ 72 ಗಂಟೆಗಳ ಮುಂಚಿನ ಅವಧಿ ಅಂದರೆ ಮೇ 7ರಿಂದ ಮತದಾನ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ನಿಯೋಜಿತ ಎಸ್‌ಎಸ್‌ಟಿ/ಎಫ್‌ಎಸ್‌ಟಿ/ಪೊಲೀಸ್ ಅಧಿಕಾರಿಗಳು/ವಿಡಿಯೋ ವಿಚಕ್ಷಣ ತಂಡಗಳು ತೀವ್ರ ನಿಗಾ ವಹಿಸಲಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

       ತಮ್ಮ ಕಚೇರಿಯಲ್ಲಿಂದು ಪತ್ರಿಕಾ ಹೇಳಿಕೆ ನೀಡಿದ ಅವರು, ಮತದಾನ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು/ಚುನಾವಣಾ ಅಭ್ಯರ್ಥಿಗಳು ಮತದಾರರ ಮೇಲೆ ಪ್ರಭಾವ ಬೀರಲು ಕೈಗೊಳ್ಳುವ ಬಿರುಸಿನ ಪ್ರಚಾರ ಕಾರ್ಯಗಳಲ್ಲಿ ಸಂಭವಿಸಬಹುದಾದ ಚುನಾವಣ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆಯನ್ನು ತಡೆಗಟ್ಟಲು ಜಿಲ್ಲೆಯಲ್ಲಿ ನಿಯೋಜಿಸಲಾಗಿರುವ ತಪಾಸಣಾ ತಂಡಗಳನ್ನು ಇನ್ನಷ್ಟು ಬಲಗೊಳಿಸಲಾಗುವುದು ಎಂದು ತಿಳಿಸಿದರು.

       ಅಭ್ಯರ್ಥಿಗಳು ಮದುವೆ ಮತ್ತಿತರ ಸಮಾರಂಭಗಳಲ್ಲಿ ಮತದಾರರಿಗೆ ಆಮಿಷ ಒಡ್ಡುವ ಹಿನ್ನೆಲೆಯಲ್ಲಿ ಉಡುಗೊರೆ/ವಸ್ತುಗಳ ವಿತರಣೆ/ಉಚಿತ ಭೋಜನ ವ್ಯವಸ್ಥೆ ಮಾಡುವ ಸಾಧ್ಯತೆ ಇರುವುದರಿಂದ ಫ್ಲೆöÊಯಿಂಗ್ ಸ್ವಾಡ್, ವೀಡಿಯೋ ವಿಚಕ್ಷಣಾ ತಂಡ, ಪೊಲೀಸ್ ಅಧಿಕಾರಿ ಸೇರಿದಂತೆ ತಪಾಸಣಾ ತಂಡಗಳು ರಾಜಕೀಯ ಪಕ್ಷ/ ಅಭ್ಯರ್ಥಿಗಳ ಮೇಲ್ ಹದ್ದಿನ ಕಣ್ಣಿಡಲಿವೆ ಎಂದು ತಿಳಿಸಿದರಲ್ಲದೆ ವಿಶೇಷವಾಗಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ/ ವ್ಯಕ್ತಿಗಳನ್ನು ತಪಾಸಣೆಗೊಳಪಡಿಲಾಗುವುದು. ತಪಾಸಣೆ ಸಮಯದಲ್ಲಿ ಸಂದೇಹ ಉಂಟಾದ ವಾಹನ/ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

      ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಮೇಲೆ ಚುನಾವಣಾ ವೆಚ್ಚ ಮೇಲುಸ್ತುವಾರಿ ತಂಡಗಳಾದ  ಎಸ್‌ಎಸ್‌ಟಿ, ವಿಎಸ್‌ಟಿ, ವಿವಿಟಿ, ಇಎಂಸಿ, ಅಬಕಾರಿ ತಂಡ, ಎಂಸಿಎಂಸಿ ತಂಡವು 24×7 ಗಂಟೆಗಳ ನಿಗಾ ವಹಿಸಲಿವೆ. ಅಕ್ರಮ ನಗದು/ವಸ್ತುಗಳನ್ನು ಜಪ್ತಿ ಮಾಡಲಿವೆ. ಯಾವುದೇ ವ್ಯಕ್ತಿ ಸಮಾಜ ವಿರೋಧಿ/ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

     ಮತದಾರರಿಗೆ ಬೆದರಿಕೆ ಹಾಕುವುದು, ಶಸ್ತ್ರಾಸ್ತ್ರಗಳನ್ನು ಹೊಂದುವುದು ಚುನಾವಣಾ ಅಪರಾಧವೆಂದು ಪರಿಗಣಿಸಲಾಗುವುದು. ಯಾವುದೇ ವ್ಯಕ್ತಿ 50,000 ರೂ.ಗಳಿಗಿಂತ ಹೆಚ್ಚಿನ ಹಣ ಸಾಗಿಸಲು ಪೂರಕ ದಾಖಲೆಗಳನ್ನು ಹೊಂದಿರಬೇಕು. ಮತದಾನದ ದಿನದ 72 ಗಂಟೆಗೂ ಮುನ್ನ ಚೆಕ್‌ಪೋಸ್ಟ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಕಣ್ಗಾವಲು ತಂಡಗಳನ್ನು ಮತ್ತಷ್ಟು ಬಲಪಡಿಸಲಾಗುವುದು. ಅಕ್ರಮ ಮದ್ಯ ಹಂಚಿಕೆ, ದೊಡ್ಡ ಪ್ರಮಾಣದ ನಗದು, ಲಂಚದ ವಸ್ತುಗಳು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

    ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ಷö್ಮ ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ  ಪೊಲೀಸ್ ಪಡೆಯನ್ನು ನೇಮಕ ಮಾಡಲಾಗುವುದು. ಯಾವುದೇ ಚುನಾವಣಾ ಅಕ್ರಮ ಕಂಡು ಬಂದಲ್ಲಿ ತಪಾಸಣೆ ನಡೆಸಿ ತಪಾಸಣೆಯ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಯಾವುದೇ ಅಭ್ಯರ್ಥಿ ಅಥವಾ ಅವರ ಏಜೆಂಟ್ ಅಥವಾ ರಾಜಕೀಯ ಪಕ್ಷದ ಕಾರ್ಯಕರ್ತರು ಅಕ್ರಮವಾಗಿ ಪ್ರಚಾರದ ಪೋಸ್ಟರ್/ಚುನಾವಣಾ ಸಾಮಗ್ರಿ/ಮಾದಕ ವಸ್ತು/ಮದ್ಯ/ಉಡುಗೊರೆಯನ್ನು ಸಾಗಿಸುತ್ತಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಯಾವುದೇ ತಾರಾ ಪ್ರಚಾರಕರು ಅವರ ಬಳಕೆಗಾಗಿ 1ಲಕ್ಷ ರೂ.ಗಳನ್ನು ಪ್ರತ್ಯೇಕವಾಗಿ ಹೊಂದಿದ್ದರೆ ಅದಕ್ಕೆ ಸಂಬಂಧಿಸಿದಂತೆ ಪಕ್ಷದ ಪ್ರಮಾಣಪತ್ರ ಹಾಜರುಪಡಿಸಿದಲ್ಲಿ ನಗದನ್ನು ವಶಪಡಿಸಿಕೊಳ್ಳುವುದಿಲ್ಲವೆಂದು ತಿಳಿಸಿದರು.

     ಮತದಾನದ 72 ಗಂಟೆಗಳ ಮುನ್ನ ಮೇ 7 ರಿಂದ ಮತದಾನ ಮುಕ್ತಾಯವಾಗುವವರೆಗೂ ಸ್ವ-ಸಹಾಯ ಸಂಘ/ಸರ್ಕಾರೇತರ ಸಂಸ್ಥೆಗಳಿಗೆ ಸಾರ್ವಜನಿಕ ಖಜಾನೆಯಿಂದ ನಗದು ರೂಪದಲ್ಲಿ ಯಾವುದೇ ಹಣ ಪಾವತಿ ಮಾಡುವಂತಿಲ್ಲ. ಮತದಾನ ದಿನದ ನಂತರ ಪಾವತಿ ಮಾಡಬಹುದಾಗಿದೆ ಎಂದು ತಿಳಿಸಿದರು.

     ಮತದಾರರ ಮೇಲೆ ಪ್ರಭಾವ ಬೀರಲು ರಾಜಕೀಯ ಪಕ್ಷಗಳು ದೊಡ್ಡ ಪ್ರಮಾಣದಲ್ಲಿ ಆಹಾರ ವ್ಯವಸ್ಥೆ ಮಾಡುವ ಸಂಭವವಿರುವುದರಿAದ ಸಮುದಾಯ ಭವನ/ಕಲ್ಯಾಣ ಮಂಟಪಗಳ ಮೇಲೆ ಚುನಾವಣಾ ಕಣ್ಗಾವಲು ತಂಡಗಳು ಕಣ್ಣಿಡಲಿವೆ. ಈ ನಿಟ್ಟಿನಲ್ಲಿ ಕಲ್ಯಾಣ ಮಂಟಪ/ಸಮುದಾಯ ಭವನಗಳ ಬುಕಿಂಗ್ ಪಟ್ಟಿಯನ್ನು ಪಡೆದು ಪರಿಶೀಲನೆಗೊಳಪಡಿಸಲಾಗುವುದು ಎಂದು ತಿಳಿಸಿದರಲ್ಲದೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುವಂತಿಲ್ಲ. ಈ ನಿಟ್ಟಿನಲ್ಲಿ ಅತಿಥಿಗೃಹ/ಧರ್ಮಶಾಲೆಗಳು ಜಾಗರೂಕತೆಯಿಂದಿರಬೇಕು. ಈ ಅವಧಿಯಲ್ಲಿ ಸರ್ಕಾರದ ಯಾವುದೇ ಯೋಜನೆ, ವೇತನ, ಇತರೆ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒದಗಿಸುವಂತಿಲ್ಲ ಎಂದು ತಿಳಿಸಿದರು.

      ರಾಜಕೀಯ ಪಕ್ಷ/ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯದಲ್ಲಿ ಯಾವುದೇ ಜಾತಿ/ಕೋಮಿನ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು. ಮಸೀದಿ, ಚರ್ಚ್, ದೇವಾಲಯಗಳು/ಇತರೆ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕೆ ವೇದಿಕೆಯಾಗಿ ಬಳಸಬಾರದು. ರಾಜ್ಯ ಪೊಲೀಸ್ ಪರವಾನಗಿ ಪಡೆಯದ  ಹೊಂದಿರುವ ವ್ಯಕ್ತಿಗಳನ್ನು ಬಂಧಿಸಲಾಗುವುದು ಎಂದರಲ್ಲದೆ ಯಾವುದೇ ಅಕ್ರಮ / ಮದ್ದುಗುಂಡುಗಳನ್ನು ಹೊರಗಿನಿಂದ ಸಾಗಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮತದಾನ ದಿನದ 3 ದಿನಗಳ ಹಿಂದಿನಿಂದ ಮತ ಎಣಿಕಾ ದಿನದವರೆಗೂ ಲಾರಿ/ಲಘು ವಾಹನ, ಮತ್ತಿತರ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಸಮಾಜ ವಿರೋಧಿ/ ವಿಚ್ಛಿದ್ರಕಾರಕ ಒಳನುಸುಳುವಿಕೆಯನ್ನು ತಡೆಗಟ್ಟಲು ಅಂತರ ಜಿಲ್ಲಾ ಗಡಿಗಳಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

      ಚುನಾವಣಾ ಸಮೀಪಿಸುತ್ತಿರುವುದರಿಂದ ಪ್ರಚಾರ ಕಾರ್ಯವು ಬಿರುಸು ಪಡೆಯಲಿದ್ದು, ಈ ಸಮಯದಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಜನರಲ್ಲಿ ಪರಸ್ಪರ ದ್ವೇಷ ಉಂಟು ಮಾಡುವ, ಜಾತಿಗಳ ನಡುವೆ ಉದ್ವಿಗ್ನತೆ ಉಂಟು ಮಾಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ಹೇಳಿಕೆಗಳನ್ನು ನೀಡಬಾರದು ಎಂದು ತಿಳಿಸಿದರಲ್ಲದೆ 2023ರ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap