ಬೆಂಗಳೂರು :
ಸೈಬರ್ ವಂಚಕರ ಮೋಸಕ್ಕೆ ಅಮಾಯಕ ಮುಗ್ದಜೀವವೊಂದು ಬಲಿಯಾಗಿದೆ. ಬೆಂಗಳೂರಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬರು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
20 ವರ್ಷದ ವಿದ್ಯಾರ್ಥಿನಿಯೊಬ್ಬಳು ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡಿದ್ದು, ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿಯನ್ನು ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ಮೂಲದ ಪಾವನ ಎಂದು ಗುರುತಿಸಲಾಗಿದೆ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮಧ್ಯರಾತ್ರಿಯ ನಂತರ ಪಾವನ ಸ್ನೇಹಿತೆ ಕೋಣೆಗೆ ಹಿಂತಿರುಗಿದಾಗ ಸಾವು ಬೆಳಕಿಗೆ ಬಂದಿದೆ.
ಪಾವನಾ ಬಸ್ ಕಂಡಕ್ಟರ್‌ನ ಮಗಳು, ಆಕೆ ಆತ್ಮಹತ್ಯೆಗೆ ಮುನ್ನ ಪತ್ರ ಬರೆದಿಟ್ಟಿದ್ದಾಳೆ. ಆಕೆಯ ಮೊಬೈಲ್ ಫೋನ್‌ನ ಲಾಕ್ ಅನ್ನು ತೆರೆಯಲು ಸಾಧ್ಯವಾಗದಿದ್ದರೂ, ಸೈಬರ್ ವಂಚನೆಯಲ್ಲಿ ಅವಳು ಸ್ವಲ್ಪ ಹಣವನ್ನು ಕಳೆದುಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಪಾವನ ಎಷ್ಟು ಹಣ ಕಳೆದುಕೊಂಡಿದ್ದಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಬೇಕಿದೆ. ಆನ್‌ಲೈನ್ ವಹಿವಾಟುಗಳನ್ನು ಪರಿಶೀಲನೆ ಮಾಡಲು ಆಕೆಯ ಫೋನ್ ಅನ್ನು ಅನ್‌ಲಾಕ್ ಮಾಡಲು ತಜ್ಞರ ಸಹಾಯ ಕೋರಲಾಗಿದೆ ಎಂದು ಹೇಳಿದರು.
ಸ್ನೇಹಿತರ ಬಳಿ 15,000 ರೂಪಾಯಿ ಸಾಲ ಮಾಡಿದ್ದು, 10 ಸಾವಿರ ರೂಪಾಯಿ ವಾಪಸ್ ಮಾಡಿದ್ದರು ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಡೆತ್ ನೋಟ್‌ನಲ್ಲಿ ಆಕೆ ಹಣ ನೀಡಬೇಕಿರುವ ಸ್ನೇಹಿತರ ಹೆಸರನ್ನು ನಮೂದಿಸಿದ್ದು, ತನ್ನ ಪರವಾಗಿ ಹಣವನ್ನು ಹಿಂದಿರುಗಿಸುವಂತೆ ಪೋಷಕರಿಗೆ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ವಂಚನೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಪೊಲೀಸರಿಗೂ ಕೂಡ ಆನ್‌ಲೈನ್ ವಂಚನೆ ಪ್ರಕರಣಗಳು ತಲೆನೋವಾಗಿದೆ. ಎಲ್ಲೋ ಹೊರ ರಾಜ್ಯದಲ್ಲಿ ಕೂತು ಇಲ್ಲಿನ ಜನಗಳನ್ನು ಬೆದರಿಸಿಯೋ, ಆಮಿಷ ಒಡ್ಡಿಯೋ ವಂಚಿಸಲಾಗುತ್ತಿದೆ.
ಎಲ್ಲರ ಬಳಿ ಈಗ ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಪೇಮೆಂಟ್ ಆಯ್ಕೆ ಇರುವುದು ವಂಚಕರಿಗೆ ವರದಾನವಾಗಿದೆ. ಇದೇ ಕಾರಣಕ್ಕೆ ಯಾವುದೇ ಅಪರಿಚಿತ ನಂಬರ್ ನಿಂದ ಆಮಿಷದ ಮೆಸೇಜ್ ಬಂದಾಗ ಪ್ರತಿಕ್ರಿಯೆ ನೀಡದಂತೆ, ಅಥವಾ ಅವರು ಕಳಿಸಿದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ