2ನೇ ಟೆಸ್ಟ್​ನಲ್ಲೂ ಇಂಗ್ಲೆಂಡ್ ಭರ್ಜರಿ ಪ್ರದರ್ಶನ

ಲಂಡನ್ 

    ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡದ ನಾಯಕ ಧನಂಜಯ ಡಿಸಿಲ್ವಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಢ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಡಾನ್ ಲಾರೆನ್ಸ್ (9) ಬೇಗನೆ ಔಟಾದರೆ, ಆ ಬಳಿಕ ಬಂದ ನಾಯಕ ಒಲೀ ಪೋಪ್ 1 ರನ್​ಗಳಿಸಿ ಪೆವಿಲಿಯನ್​ಗೆ ಮರಳಿದ್ದರು. ಇನ್ನು ಬೆನ್ ಡಕೆಟ್ ಬಿರುಸಿನ 40 ರನ್​ಗಳನ್ನು ಬಾರಿಸಿ ವಿಕೆಟ್ ಒಪ್ಪಿಸಿದ್ದರು.

    ಈ ಹಂತದಲ್ಲಿ ಕಣಕ್ಕಿಳಿದ ಜೋ ರೂಟ್ ಆಕರ್ಷಕ ಬ್ಯಾಟಿಂಗ್​ನೊಂದಿಗೆ ಶತಕ ಸಿಡಿಸಿದರು. 206 ಎಸೆತಗಳನ್ನು ಎದುರಿಸಿದ ರೂಟ್ 18 ಫೋರ್​ಗಳೊಂದಿಗೆ 143 ರನ್​ ಬಾರಿಸಿದರು. ಇದರ ನಡುವೆ ಹ್ಯಾರಿಸ್ ಬ್ರೂಕ್ 33 ರನ್ ಬಾರಿಸಿದರೆ, ಜೇಮಿ ಸ್ಮಿತ್ 21 ರನ್​ಗಳ ಕೊಡುಗೆ ನೀಡಿದರು.

   ಇನ್ನು 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಸ್ ಅಟ್ಕಿನ್ಸನ್ ಚೊಚ್ಚಲ ಶತಕ ಪೂರೈಸುವ ಮೂಲಕ ಬ್ಯಾಟ್ ಮೇಲೆಕ್ಕೆತ್ತಿದರು. 115 ಎಸೆತಗಳನ್ನು ಎದುರಿಸಿದ ಅಟ್ಕಿನ್ಸನ್ 14 ಫೋರ್ ಹಾಗೂ 4 ಭರ್ಜರಿ ಸಿಕ್ಸರ್​ಗಳೊಂದಿಗೆ 118 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 427 ರನ್​ಗಳಿಸಿ ಆಲೌಟ್ ಆಯಿತು. ಶ್ರೀಲಂಕಾ ಪರ ಅಸಿತಾ ಫರ್ನಾಂಡೊ 102 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.

   ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್ ವೇಗಿಗಳು ಆಘಾತ ನೀಡಿದ್ದರು. ಸಾಂಘಿಕ ದಾಳಿ ಸಂಘಟಿಸಿದ ಆಂಗ್ಲರು 87 ರನ್​ಗಳಿಗೆ 6 ವಿಕೆಟ್ ಉರುಳಿಸಿದರು. ಇದಾಗ್ಯೂ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮಿಂದು ಮೆಂಡಿಸ್ 120 ಎಸೆತಗಳಲ್ಲಿ 8 ಫೋರ್ ಹಾಗೂ 3 ಸಿಕ್ಸ್​ನೊಂದಿಗೆ 74 ರನ್ ಬಾರಿಸಿದರು.ಆದರೆ ಅತ್ಯುತ್ತಮ ದಾಳಿಗೆ ನಲುಗಿದ ಶ್ರೀಲಂಕಾ ತಂಡವು ಅಂತಿಮವಾಗಿ 196 ರನ್​ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಒಲೀ ಸ್ಟೋನ್, ಮ್ಯಾಥ್ಯೂ ಪೋಟ್ಸ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

 

Recent Articles

spot_img

Related Stories

Share via
Copy link
Powered by Social Snap